ವಿಕಾಸಸೌಧದ ಮಹಿಳಾ ಸಿಬ್ಬಂದಿಗೆ ಕೊರೋನ ದೃಢ: ಎರಡು ಕಚೇರಿಗಳು ಸೀಲ್‍ಡೌನ್

Update: 2020-06-16 14:46 GMT

ಬೆಂಗಳೂರು, ಜೂ.16: ವಿಕಾಸಸೌಧದ ಮಹಿಳಾ ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆ ಎರಡು ಕಚೇರಿಗಳನ್ನು ಸೀಲ್‍ಡೌನ್ ಮಾಡಲಾಗಿದೆ.

ವಿಕಾಸಸೌಧದ ನೆಲಮಹಡಿಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಗೆ ಕೊರೋನ ಸೋಂಕು ತಗಲಿದ್ದು, ಸೋಂಕಿತ ಮಹಿಳೆಯು ಆಹಾರ ಇಲಾಖೆಯಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ ವೇಳೆ ಕೊರೋನ ಸೋಂಕು ಇರುವುದು ಪತ್ತೆಯಾಗಿದೆ.

ಸೋಂಕಿತ ಮಹಿಳೆಯನ್ನು ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಮಂಗಳವಾರ ಸಹ ಸೋಂಕಿತ ಮಹಿಳೆ ಕರ್ತವ್ಯಕ್ಕೆ ಹಾಜರಾಗಿದ್ದರು. ಹೀಗಾಗಿ ಅಧಿಕಾರಿಗಳು ವಿಕಾಸಸೌಧದ ಆಹಾರ ಇಲಾಖೆಯ ಕೊಠಡಿಯ ಅಕ್ಕಪಕ್ಕದ ಎರಡು ಕೊಠಡಿಗಳನ್ನು ಸೀಲ್‍ಡೌನ್ ಮಾಡಿದ್ದಾರೆ.

ಇದರಿಂದಾಗಿ ವಿಕಾಸಸೌಧ ಹಾಗೂ ವಿಧಾನಸೌಧದ ನೌಕರರು ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ಸಚಿವಾಲಯ ನೌಕರರ ಸಂಘದ ನಿಯೋಗವು, ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರನ್ನು ಭೇಟಿಯಾಗಿ ಆಹಾರ ಇಲಾಖೆಯ ಎಲ್ಲ ಸಿಬ್ಬಂದಿಯನ್ನು ಕೊರೋನ ಟೆಸ್ಟ್ ಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು.

ಭೇಟಿ ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಗುರುಸ್ವಾಮಿ, ಸಚಿವಾಲಯ ಆಡಳಿತ ಕೇಂದ್ರ ಬಿಂದುವಾಗಿದೆ. ಇಲ್ಲಿ ಯಾರಿಗಾದರು ಕೊರೋನ ಬಂದರೆ ಇಡೀ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಸರಕಾರ ಸಾಕಷ್ಟು ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಸಚಿವಾಲಯದ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಟನೆಲ್ ಅಳವಡಿಸಬೇಕು. ಕೇವಲ ಥರ್ಮಲ್ ಸ್ಕ್ರೀನಿಂಗ್ ಮಾಡಿದರೆ ಏನೂ ಪ್ರಯೋಜನವಿಲ್ಲ. ಹೀಗಾಗಿ ಸಚಿವಾಲಯದಲ್ಲಿ ಇನ್ನಷ್ಟು ಹೆಚ್ಚಿನ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News