ಇಂದು ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆ

Update: 2020-06-18 06:16 GMT

ಬೆಂಗಳೂರು : ಲಾಕ್‌ಡೌನ್ ಪರಿಣಾಮ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಗುರುವಾರ ಬೆಳಗ್ಗೆ 10.15ರಿಂದ 1.30ರವರೆಗೆ ರಾಜ್ಯದ 1,016 ಕೇಂದ್ರಗಳಲ್ಲಿ ನಡೆಯಲಿದೆ.

‘ವಿದ್ಯಾರ್ಥಿಗಳು ಮಾಸ್ಕ್ ಹಾಕಿಕೊಂಡೇ ಪರೀಕ್ಷಾ ಕೇಂದ್ರಕ್ಕೆ ಬರಬೇಕು. ಜ್ವರದ ಲಕ್ಷಣ ಇಲ್ಲದವರು ಮಾತ್ರ ಪರೀಕ್ಷಾ ಕೊಠಡಿಗೆ ತೆರಳಬಹುದು. ಜ್ವರದ ಲಕ್ಷಣ ಕಂಡು ಬಂದರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಲಾಗುವುದು‌’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

ಸಿಬಿಎಸ್‌ಇ 12ನೇ ತರಗತಿಯ ಬಾಕಿ ಉಳಿದಿರುವ ವಿಷಯಗಳ ಪರೀಕ್ಷೆಗಳನ್ನು ನಡೆಸುವ ಕುರಿತು ಶೀಘ್ರದಲ್ಲೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಸಿಬಿಎಸ್‌ಇ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ಹಿಂದೆ ಜುಲೈ 1ರಿಂದ ಜುಲೈ 15ರವರೆಗೆ ಪರೀಕ್ಷೆ ನಡೆಸುವುದಾಗಿ ಸಿಬಿಎಸ್‌ಇ ಘೋಷಿಸಿತ್ತು.

ಮಂಗಳೂರು : ದ.ಕ.ಜಿಲ್ಲೆಯ 51 ಕೇಂದ್ರಗಳಲ್ಲಿ ಗುರುವಾರ ಬೆಳಗ್ಗೆ ಆರಂಭಗೊಂಡಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಮಾಸ್ಕ್ ಧರಿಸಿ ಪರೀಕ್ಷೆ ಬರೆಯುತ್ತಿದ್ದಾರೆ. ಪ್ರತೀ ಕೋಣೆಯಲ್ಲೂ ಗರಿಷ್ಟ 24 ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಪರೀಕ್ಷೆಗೆ 33,264 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಆ ಪೈಕಿ 6,322 ವಿದ್ಯಾರ್ಥಿಗಳು ಹೊರ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವುದಾಗಿ ತಿಳಿಸಿದ್ದರಿಂದ ಜಿಲ್ಲೆಯಲ್ಲಿ 26,942 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಈ ಮಧ್ಯೆ ಕೇರಳದಿಂದ 1,137 ವಿದ್ಯಾರ್ಥಿಗಳು ದ.ಕ.ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಅವರನ್ನು ತಲಪಾಡಿ ಗಡಿಯಿಂದ 32 ಬಸ್‌ಗಳಲ್ಲಿ ವಿವಿಧ ಕೇಂದ್ರಗಳಿಗೆ ಕರೆದೊಯ್ಯಲಾಯಿತು.

ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಆರೋಗ್ಯ ಇಲಾಖೆಯಿಂದ ಓರ್ವ ವೈದ್ಯ ಅಥವಾ ನರ್ಸ್, ಓರ್ವ ಆರೋಗ್ಯ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪರೀಕ್ಷಾ ಕೇಂದ್ರದ 200 ಮೀ.ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News