ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಹಿಂದೆಗೆತಕ್ಕೆ ಆಗ್ರಹ

Update: 2020-06-18 12:35 GMT

ಉಡುಪಿ, ಜೂ.18: ಕರ್ನಾಟಕ ಸರಕಾರ ಕಳೆದ ಮೇ 13ರಂದು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109ಕ್ಕೆ ರೈತ ವಿರೋಧಿಯಾಗಿ ತಿದ್ದುಪಡಿ ಮಾಡಿ ಆದೇಶಿಸಿರುವುದನ್ನು ಹಾಗೂ ವಿದ್ಯುತ್ ಖಾಸಗೀಕರಣ ಪ್ರಸ್ತಾಪವನ್ನು ಕರ್ನಾಟಕ ಪ್ರಾಂತ ರೈತ ಸಂಘ ಕುಂದಾಪುರ ತಾಲೂಕು ಸಮಿತಿ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿಗಳು ತೀವ್ರವಾಗಿ ಖಂಡಿಸಿದ್ದು, ಅವುಗಳನ್ನು ಕೂಡಲೇ ಹಿಂದೆಗೆದು ಕೊಳ್ಳಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ಬಿಜೆಪಿ ಸರಕಾರ ತಿದ್ದುಪಡಿಗಳ ಮೂಲಕ ಭೂಸುಧಾರಣಾ ಕಾಯ್ದೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡಲು ಹೊರಟಿದೆ. ಇದರಲ್ಲಿ ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲಾಗಿದೆ. ಇಂಥ ಜನವಿರೋಧಿ ತಿದ್ದುಪಡಿಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಅಲ್ಲದೇ ವಿದ್ಯುತ್ ಖಾಸಗೀಕರಣ ಮಾಡುವ ಪ್ರಸ್ತಾಪವನ್ನು ಹಿಂದೆಗೆದು ಕೊಳ್ಳಬೇಕೆಂದು ಕೂಡಾ ನಾವು ಒತ್ತಾಯಿಸುತ್ತೇವೆ ಎಂದು ಈ ಎರಡು ರಾಜ್ಯ ಮಟ್ಟದ ಸಂಘಟನೆಗಳು ರಾಜ್ಯ ಸರಕಾರವನ್ನು ಒತ್ತಾಯಿಸಿವೆ.

ದೇಶವನ್ನು ಮತ್ತು ರಾಜ್ಯವನ್ನು ಕಾರ್ಪೋರೇಟ್ ಕಂಪೆನಿಗಳ ಕೈಗೆ ನೇರವಾಗಿ ಹಾಗೂ ಅತ್ಯಂತ ವೇಗವಾಗಿ ವರ್ಗಾಯಿಸುವ ಹಾಗೂ ದೇಶದ ಸ್ವಾತಂತ್ರವನ್ನು ಕೊರ್ಪೋರೇಟ್ ಕಂಪೆನಿಗಳಿಗೆ ಒತ್ತೆ ಇಡುವ ಉದ್ದೇಶವನ್ನು ಖಂಡಿಸುತ್ತೇವೆ. ಸರಕಾರದ ಜನ ವಿರೋಧಿ, ರೈತ ವಿರೋಧಿ ಮತ್ತು ಕಾರ್ಮಿಕ ವಿರೋದಿ ನೀತಿಗಳನ್ನು ಕೈ ಬಿಡಬೇಕೆಂದು ಸಂಘಟನೆಗಳು ಮುಖ್ಯಮಂತ್ರಿಗಳಿಗೆ ಕಳುಹಿಸಿದ ಮನವಿಯಲ್ಲಿ ತಿಳಿಸಿವೆ.

ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕೃಷಿ ಕೂಲಿಕಾರರ ತಾಲೂಕು ಸಮಿತಿಗಳು, ಕುಂದಾಪುರ ತಹಶೀಲ್ದಾರ ಮೂಲಕ ಮುಖ್ಯ ಮಂತ್ರಿಯವರಿಗೆ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ರೈತ ಕಾರ್ಮಿಕ ಮುಖಂಡ ಕೆ. ಶಂಕರ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ವೆಂಕಟೇಶ್ ಕೋಣೆ ಹಾಗೂ ಕಾರ್ಯದರ್ಶಿ ನಾಗರತ್ನ ನಾಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News