ಉಡುಪಿ: ಗುರುವಾರ ಜಿಲ್ಲೆಯ 27 ಮಂದಿಯ ಕೊರೋನ ಸೋಂಕು ವರದಿ ನೆಗೆಟಿವ್

Update: 2020-06-18 14:32 GMT

ಉಡುಪಿ, ಜೂ.18: ಉಡುಪಿಯಲ್ಲಿ ಗುರುವಾರ ಅಧಿಕೃತವಾಗಿ ಯಾರಲ್ಲೂ ಕೋವಿಡ್- 19 ಸೋಂಕು ಪತ್ತೆಯಾಗಿಲ್ಲ. ದಿನದಲ್ಲಿ ಬಂದ 27 ಮಂದಿಯ ಗಂಟಲು ದ್ರವ ಮಾದರಿಯ ವರದಿಗಳು ನೆಗೆಟಿವ್ ಫಲಿತಾಂಶವನ್ನು ನೀಡಿವೆ ಎಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಈ ಮೂಲಕ ಉಡುಪಿ ಜಿಲ್ಲೆಯ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 1039ರಲ್ಲಿ ಸ್ಥಿರವಾಗಿದ್ದು, ಇದರಿಂದ ಉಡುಪಿ ಜಿಲ್ಲೆಯ ಒಂದು ವಾರದಿಂದ ಇದ್ದ ಅಗ್ರಸ್ಥಾನವನ್ನು ಕಲಬುರಗಿ ಜಿಲ್ಲೆಗೆ ಬಿಟ್ಟುಕೊಟ್ಟು ಎರಡನೇ ಸ್ಥಾನವನ್ನು ಅಲಂಕರಿಸಿದೆ. ಇಂದು ಬಂದ 48 ಪಾಸಿಟಿವ್ ಕೇಸುಗಳೊಂದಿಗೆ ಕಲಬುರಗಿ ಜಿಲ್ಲೆ 1074 ಪಾಸಿಟಿವ್ ಕೇಸ್‌ಗಳೊಂದಿಗೆ ಕಲಬುರಗಿ ಮತ್ತೆ ಅಗ್ರಸ್ಥಾನಕ್ಕೇರಿದೆ. 873 ಪ್ರಕರಣಗಳೊಂದಿಗೆ ಯಾದಗಿರಿ ಮೂರನೇ ಸ್ಥಾನದಲ್ಲೇ ಮುಂದುವರಿದಿದ್ದರೆ, ಅದರ ಬೆನ್ನಟ್ಟಿ ಬಂದಿರುವ ಬೆಂಗಳೂರು ನಗರ 844 ಪ್ರಕರಣಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿವೆ.

38 ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಇಂದು 38 ಮಂದಿ ಸೇರಿದಂತೆ ಒಟ್ಟು 946 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದೀಗ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಕೇವಲ 92 ಮಂದಿ ಮಾತ್ರ ಸೋಂಕಿಗಾಗಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.

27 ನೆಗೆಟಿವ್: ಗುರುವಾರ ಸೋಂಕಿನ ಪತ್ತೆಗಾಗಿ ಕಳುಹಿಸಿದ ಸ್ಯಾಂಪಲ್‌ಗಳಲ್ಲಿ 27 ನೆಗೆಟಿವ್ ಆಗಿ ಬಂದಿವೆ. ಇಂದು ಒಟ್ಟು 107 ಮಂದಿಯ ಗಂಟಲು ದ್ರವ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 18 ಮಂದಿ, ಕೋವಿಡ್ ಸಂಪರ್ಕಿತರು 31 ಮಂದಿ, ಉಸಿರಾಟದ ತೊಂದರೆಯವರು ಒಬ್ಬರು, ಶೀತಜ್ವರದಿಂದ ಬಳಲುವ 6 ಮಂದಿ ಹಾಗೂ ಕೋವಿಡ್ ಹಾಟ್‌ಸ್ಪಾಟ್ ಪ್ರದೇಶಗಳಿಂದ ಬಂದ 51 ಮಂದಿಯ ಸ್ಯಾಂಪಲ್ ಗಳಿವೆ ಎಂದು ಡಾ. ಸೂಡ ತಿಳಿಸಿದರು.

ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಒಟ್ಟು ಮಾದರಿಗಳ ಸಂಖ್ಯೆ 13,140 ಕ್ಕೇರಿದೆ. ಇವುಗಳಲ್ಲಿ ಈವರೆಗೆ 11,903 ನೆಗೆಟಿವ್, 1039 ಸ್ಯಾಂಪಲ್ ಪಾಸಿಟಿವ್ ಆಗಿವೆ. ಇನ್ನು ಒಟ್ಟು 198 ಸ್ಯಾಂಪಲ್‌ಗಳ ವರದಿ ಬರಬೇಕಿದೆ. ಗುರುವಾರ 12 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ತಲಾ ಆರು ಮಂದಿ ಉಸಿರಾಟ ತೊಂದರೆಯವರು ಹಾಗೂ ಶೀತಜ್ವರದಿಂದ ಬಳಲುವವರು ಇದ್ದಾರೆ ಎಂದರು.

ಜಿಲ್ಲೆಯ ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್‌ಗಳಿಂದ ಇಂದು 7 ಮಂದಿ ಬಿಡುಗಡೆಗೊಂಡಿದ್ದು, 76 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 81 ಮಂದಿ ಸೇರಿದಂತೆ ಒಟ್ಟು 5666 ಮಂದಿಯನ್ನು ಕೊರೋನ ತಪಾಸಣೆಗೆ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 724 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್‌ ಚಂದ್ರ ಸೂಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News