ದ.ಕ. ದಲ್ಲಿ ಮತ್ತೆ 23 ಮಂದಿಗೆ ಕೊರೋನ ಸೋಂಕು

Update: 2020-06-18 14:49 GMT

ಮಂಗಳೂರು, ಜೂ.18: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ಪ್ರತಿದಿನ ಏರಿಕೆಗತಿಯಲ್ಲೇ ಸಾಗುತ್ತಿದ್ದು, ಗುರುವಾರ ಮತ್ತೆ 23 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗಿನ ಕೊರೋನ ಸೋಂಕಿತರ ಸಂಖ್ಯೆ 409ಕ್ಕೆ ಏರಿದೆ. ಗುರುವಾರ ಬಾಲಕ ಸಹಿತ ಒಟ್ಟು ಆರು ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಮನೆಗೆ ವಾಪಸಾಗಿದ್ದಾರೆ.

ಪತ್ತೆಯಾದ 23 ಹೊಸ ಪ್ರಕರಣಗಳಲ್ಲಿ 21 ಮಂದಿ ಸೌದಿ ಅರೇಬಿಯಾದಿಂದ ಆಗಮಿಸಿದವರಾಗಿದ್ದರೆ, ಉಳಿದಿಬ್ಬರಿಗೆ ಸೋಂಕಿತರೊಬ್ಬರ ಪ್ರಾಥಮಿಕ ಸಂಪರ್ಕದಿಂದ ಹರಡಿದೆ. ಇವರೆಲ್ಲರೂ ಕ್ವಾರಂಟೈನ್‌ನಲ್ಲಿದ್ದು, ಇದೀಗ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ಜೂ.8 ಮತ್ತು 11ರಂದು ಸೌದಿ ಅರೇಬಿಯಾದಿಂದ ಆಗಮಿಸಿದವರಲ್ಲಿ 23, 50, 22, 23, 53, 25, 23, 23, 35, 30, 24, 27, 45, 38, 27, 36, 39, 25, 23 ವರ್ಷದ ಪುರುಷರಾಗಿದ್ದರೆ, 44, 48 ವರ್ಷದ ಮಹಿಳೆಯರಾಗಿದ್ದಾರೆ. ಇನ್ನೊಂದು ಪ್ರಕರಣದಲ್ಲಿ 28, 34 ವರ್ಷದ ಪುರುಷರಿಬ್ಬರಿಗೆ ರೋಗಿ ಸಂಖ್ಯೆ 6618ರ ಪ್ರಾಥಮಿಕ ಸಂಪರ್ಕದಿಂದ ಹರಡಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 46, 52, 12, 29, 28, 24 ವರ್ಷದ ಪುರುಷರು ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವುದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 176ಕ್ಕೇರಿದೆ.

ಪ್ರಸ್ತುತ ಆಸ್ಪತ್ರೆಯಲ್ಲಿ 225 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಬಹುತೇಕರ ಆರೋಗ್ಯ ಸ್ಥಿರವಾಗಿದೆ. ಆದರೆ ನ್ಯುಮೋನಿಯಾ ಮತ್ತು ಮಧುಮೇಹದಿಂದ ಬಳಲುತ್ತಿರುವ 70 ವರ್ಷದ ವ್ಯಕ್ತಿ ಹಾಗೂ ಮಧುಮೇಹ ಮತ್ತು ಅರ್ಬುದ ರೋಗದಿಂದ ಬಳಲುತ್ತಿರುವ 52 ವರ್ಷ ವಯಸ್ಸಿನ ವ್ಯಕ್ತಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗುರುವಾರ ಪ್ರಯೋಗಾಲಯದಿಂದ ಒಟ್ಟು 259 ಮಂದಿಯ ವರದಿಗಳು ಬಂದಿದ್ದು, 23 ಪಾಸಿಟಿವ್ ಆಗಿದ್ದರೆ ಉಳಿದ 236 ನೆಗೆಟಿವ್ ಆಗಿವೆ. ಗುರುವಾರ ಮತ್ತೆ 140 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News