ಕರ್ಣಾಟಕ ಬ್ಯಾಂಕಿನಿಂದ ನಿಟ್ಟೂರು ಶಾಲೆಗೆ ಶಾಲಾ ಬಸ್ ಕೊಡುಗೆ

Update: 2020-06-18 16:09 GMT

ಉಡುಪಿ, ಜೂ.18: ಕಳೆದ ಐದು ದಶಕಗಳಿಂದ ಕನ್ನಡ ಮಾಧ್ಯಮದಲ್ಲಿ ಸಂಪೂರ್ಣ ಉಚಿತವಾಗಿ ಪ್ರೌಢ ಶಿಕ್ಷಣ ನೀಡುತ್ತಾ ಬಂದು ಪ್ರಸ್ತುತ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಉಡುಪಿಯ ನಿಟ್ಟೂರು ಪ್ರೌಢ ಶಾಲೆಗೆ ಕರ್ಣಾಟಕ ಬ್ಯಾಂಕ್ ತನ್ನ ಸಿಎಸ್‌ಆರ್ ನಿಧಿಯಿಂದ 20 ಆಸನಗಳ ವಾಹನವೊಂದನ್ನು ಕೊಡುಗೆಯಾಗಿ ನೀಡಿದೆ.

ಗುರುವಾರ ಜೂ.18ರಂದು ಮಂಗಳೂರಿನಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿ ಮುಂಭಾಗದಲ್ಲಿ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಎಂ. ಎಸ್. ಅವರು ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ಹಾಗೂ ಶಾಸಕ ಕೆ.ರಘುಪತಿ ಭಟ್ ಅವರಿಗೆ ವಾಹನದ ಕೀ ನೀಡುವ ಮೂಲಕ ಶಾಲಾ ವಾಹನ ವನ್ನು ಹಸ್ತಾಂತರಿಸಿದರು.

ಕೋವಿಡ್-19ರ ಈ ಸಂಕಷ್ಟ ಕಾಲದಲ್ಲೂ ಬಡ ಮಕ್ಕಳ ಶಿಕ್ಷಣದ ಮೇಲಿನ ಪ್ರೀತಿಯಿಂದ ಬ್ಯಾಂಕ್ ವಾಹನ ನೀಡುತ್ತಿರುವುದು ಸಾಮಾಜಿಕ ಸ್ಪಂದನೆಯ ದ್ಯೋತಕವಾಗಿದೆ ಎಂದು ಶಾಸಕರು ಈ ಸಂದರ್ಭದಲ್ಲಿ ನುಡಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಅಧಿಕಾರಿಗಳಾದ ವೈ. ಬಾಲಚಂದ್ರ ರಾವ್, ಗೋಕುಲ್‌ದಾಸ್ ಪೈ, ಮಂಜುನಾಥ ಭಟ್, ಶ್ರೀನಿವಾಸ ದೇಶಪಾಂಡೆ ಹಾಗೂ ಸೊಸೈಟಿಯ ಉಪಾಧ್ಯಕ್ಷ ಎಂ.ಗಂಗಾಧರ ರಾವ್, ಶಾಲಾ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News