ಬೆಂಗಳೂರು: 702 ಕೋಟಿ ರೂ. ಹಗರಣ ಆರೋಪ; ಎಫ್‍ಐಆರ್ ದಾಖಲಿಸಿದ ಎಸಿಬಿ

Update: 2020-06-18 16:35 GMT

ಬೆಂಗಳೂರು, ಜೂ.18: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳ ಮತ್ತು ಆರ್‍ಒ ಘಟಕಗಳ 702 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಪಾಲಿಕೆಯ 5 ವಲಯಗಳಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಸೇರಿ ಹಲವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಎಫ್‍ಐಆರ್ ದಾಖಲಿಸಿಕೊಂಡಿದೆ.

ಬಿಜೆಪಿ ಮುಖಂಡ ಎನ್.ಆರ್.ರಮೇಶ್ ನೀಡಿದ ದೂರಿನ ಆಧಾರದ ಮೇಲೆ ದಾಸರಹಳ್ಳಿ, ಮಹದೇವಪುರ, ರಾಜರಾಜೇಶ್ವರಿನಗರ, ಯಲಹಂಕ, ಬ್ಯಾಟರಾಯನಪುರದ ಬಿಬಿಎಂಪಿ ವಲಯಗಳ ಹಿಂದಿನ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಕೆಲ ಗುತ್ತಿಗೆದಾರರು ಸೇರಿ ಅನೇಕರ ವಿರುದ್ಧ ಎಸಿಬಿ ಮೊಕದ್ದಮೆ ದಾಖಲಿಸಿಕೊಂಡಿದೆ.

ಏನಿದು ಆರೋಪ?: ಬಿಬಿಎಂಪಿ ವ್ಯಾಪ್ತಿಯ ಕಾವೇರಿ ನೀರಿನ ಪೂರೈಕೆ ಅಸಮರ್ಪಕವಾಗಿರುವ ಹೊಸ 5 ವಲಯಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ 9,588 ಕೊಳವೆ ಬಾವಿಗಳು ಮತ್ತು 976  ಘಟಕಗಳಿಗೆ ಅನುಮೋದನೆ ನೀಡಲಾಗಿತ್ತು. 
2016-17ನೇ ಸಾಲಿನಿಂದ ಮೂರು ವರ್ಷಗಳ ಅವಧಿಯಲ್ಲಿ ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ ಮತ್ತು ದಾಸರಹಳ್ಳಿಯ ಹೊಸ ವಲಯಗಳಲ್ಲಿರುವ 66 ವಾರ್ಡ್‍ಗಳಿಗೆ ಮಾತ್ರವೇ ಕೊಳವೆಬಾವಿ ಮತ್ತು ಆರ್.ಒ ಘಟಕಗಳಿಗೆ ಒಟ್ಟು 701.34 ಕೋಟಿ ರೂ. ಬಿಡುಗಡೆಯಾಗಿತ್ತು. ಕೊಳವೆ ಬಾವಿ ಕೊರೆಸಲು ಒಟ್ಟು 589.82 ಕೋಟಿ ರೂ. ಬಿಡುಗಡೆಯಾಗಿದೆ. ಆರ್.ಒ ಘಟಕಗಳ ನಿರ್ಮಾಣಕ್ಕೆ 111.52 ಕೋಟಿ ರೂ. ಬಿಡುಗಡೆಯಾಗಿದೆ. 5 ವಲಯಗಳ 66 ವಾರ್ಡ್‍ಗಳಲ್ಲಿ 8,426 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. 697 ಆರ್.ಒ ಘಟಕ ನಿರ್ಮಿಸಲಾಗಿದೆ. 

ಆರ್.ಒ ಘಟಕದ ನಿರ್ಮಾಣಕ್ಕೆ ವಾಸ್ತವವಾಗಿ ತಗಲುವ ವೆಚ್ಚ 7.5 ಲಕ್ಷ ರೂ. ಆದರೆ, ಬಹುತೇಕ ಆರ್.ಒ. ಘಟಕಗಳ ನಿರ್ಮಾಣಕ್ಕೆ 16 ಲಕ್ಷ ರೂ. ಬಿಡುಗಡೆ ಮಾಡಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿ ಎನ್.ಆರ್.ರಮೇಶ್ ದೂರು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News