ಪುತ್ತೂರು : ವೃದ್ಧ ದಂಪತಿಗೆ ಬದುಕು ನೀಡುತ್ತಿರುವ ಎಸ್ಸೈ
ಪುತ್ತೂರು, ಜೂ.18: ಹೆತ್ತ ಮಕ್ಕಳೇ ತಮ್ಮ ತಂದೆ ತಾಯಿಗಳನ್ನು ಮನೆಯಿಂದ ಹೊರಗಟ್ಟುವ, ಆಸ್ತಿಗಾಗಿ ಹೆತ್ತವರನ್ನೇ ಕೊಂದು ಹಾಕುವ ಬಹಳಷ್ಟು ಘಟನೆಗಳನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅನಾಥ ವೃದ್ಧ ದಂಪತಿಗೆ ಆಸರೆಯಾಗುವ ಮೂಲಕ ಮನೆಮಾತಾಗಿದ್ದಾರೆ.
ಬೆಂಗಳೂರಿನ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿರುವ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ನಿವೃತ್ತ ಸರ್ವೇ ಸುಪರ್ವೈಸರ್ ಬಾಲಕೃಷ್ಣ ಪೂಜಾರಿ ಮತ್ತು ಗುಣವತಿ ದಂಪತಿಯ ಪುತ್ರ ಪ್ರದೀಪ್ ಪೂಜಾರಿ ಎಲ್ಲಿರಿಗೂ ಮಾದರಿಯಾಗಿರುವ ಎಸ್ಸೈ.
ಸುಮಾರು 10 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರದೀಪ್ ಪೂಜಾರಿ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದು, ಇದೀಗ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಎಸ್ಸೈ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನ ದೇವನ ಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಜಾಲಿಗೆ ಪಂಚಾಯತ್ ವ್ಯಾಪ್ತಿಯ ಬಸವನಪುರ ಗಾಮದ ಮಕ್ಕಳಿಲ್ಲದೆ ಅನಾಥರಾಗಿರುವ ವೃದ್ಧ ದಂಪತಿ ನರಸಿಂಹಪ್ಪ (77) ಮತ್ತು ಗಂಗಮ್ಮ(70)ರನ್ನು ದತ್ತು ಸ್ವೀಕಾರ ಮಾಡಿ ಸಲಹುತ್ತಿದ್ದಾರೆ. ಈ ದಂಪತಿಯ ಜೀವನ ಪರ್ಯಂತ ಸಾಕಲು ಮುಂದಾಗಿರುವ ಪ್ರದೀಪ್ ಪೂಜಾರಿಯ ಚಿಂತನೆ ಸಮಾಜಕ್ಕೆ ಮಾದರಿಯಾಗಿದೆ.
ಮಕ್ಕಳಿಲ್ಲದ ನರಸಿಂಹಪ್ಪ ಮತ್ತು ಗಂಗಮ್ಮ ದಂಪತಿ ದುಡಿಯಲು ಅಶಕ್ತರಾಗಿದ್ದಾರೆ. ವಾರ್ಧಕ್ಯದಿಂದಾಗಿ ಸರಿಯಾಗಿ ನಡೆyಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದು, ದಿನದ ತುತ್ತಿಗೂ ಈ ಬಡ ದಂಪತಿ ತೊಂದರೆ ಅನುಭವಿಸುತ್ತಿದ್ದರು. ಅಚಾನಕ್ ಆಗಿ ಪ್ರದೀಪ್ ಪೂಜಾರಿ ಅವರಿಗೆ ಈ ವೃದ್ಧ ದಂಪತಿಗಳ ಪರಿಚಯವಾಗಿತ್ತು. ಅವರ ಬದುಕಿನ ಸಂಕಷ್ಟವನ್ನು ಅರಿತ ಈ ಪೊಲೀಸ್ ಅಧಿಕಾರಿ ಅವರ ಮನೆ ಬಾಡಿಗೆ, ದೈನಂದಿನ ಖರ್ಚು ಹಾಗೂ ಔಷಧೋಪಚಾರ ಸೇರಿದಂತೆ ಎಲ್ಲವನ್ನೂ ತಾನೇ ಭರಿಸುತ್ತಿದ್ದಾರೆ. ಪ್ರತಿ ತಿಂಗಳ ಮನೆ ಬಾಡಿಗೆ, ಆಹಾರದ ವೆಚ್ಚ ಹಾಗೂ ಅಗತ್ಯ ಬಿದ್ದಾಗ ಔಷಧ, ಬಟ್ಟೆಬರೆಯನ್ನು ನೀಡಿ ನೊಂದ ದಂಪತಿಯ ಕಣ್ಣೀರು ಒರೆಸುವ ಕೆಲಸವನ್ನು ಮಾಡುತ್ತಿದ್ದಾರೆ. ಬದುಕಿನಲ್ಲಿ ನೊಂದಿರುವ ವೃದ್ಧ ದಂಪತಿಯ ಕಷ್ಟವನ್ನು ಕಂಡು ನಾನು ಅವರನ್ನು ದತ್ತು ಪಡೆದುಕೊಂಡು ಸಲಹುವ ತೀರ್ಮಾನಕ್ಕೆ ಬಂದೆ. ಅವರ ಮೊಗದಲ್ಲಿ ನಗು ಕಾಣುವಾಗ ನೆಮ್ಮದಿ, ಸಾರ್ಥಕ್ಯ ಭಾವನೆ ಮೂಡುತ್ತದೆ ಎನ್ನುತ್ತಾರೆ ಎಸ್ಸೈ ಪ್ರದೀಪ್ ಪೂಜಾರಿ.
ಹೆತ್ತ ತಂದೆ, ತಾಯಿಗಳನ್ನೇ ನೋಡದ ಇಂದಿನ ಸಮಾಜದಲ್ಲಿ, ಯಾವುದೋ ಹಿರಿ ಜೀವಗಳನ್ನು ಸಾಕಿ ಸಲಹುವ, ಅವರ ಸಂಪೂರ್ಣ ರಕ್ಷಣೆ ಮಾಡುತ್ತಿರುವ ಪುತ್ತೂರು ಮೂಲದವರಾದ ಪ್ರದೀಪ್ ಪೂಜಾರಿ ಅವರ ಕೆಲಸ ಎಲ್ಲರಿಗೂ ಮಾದರಿಯಾಗಿದೆ. ಮಾನವೀಯತೆಗೆ ಬೆಲೆ ಕೊಡುವ ಇಂತಹ ಅಧಿಕಾರಿಗಳಿಗೆ ‘ಹ್ಯಾಟ್ಸ್ ಅಫ್’ ಮಾಡುತ್ತೇನೆ
- ಶಕುಂತಳಾ ಟಿ. ಶೆಟ್ಟಿ, ಮಾಜಿ ಶಾಸಕರು, ಪುತ್ತೂರು, ವಿಧಾನಸಭಾ ಕ್ಷೇತ್ರ
ವೃದ್ಧ ದಂಪತಿಗೆ ಆಸರೆಯಾಗಿರುವ ಪ್ರದೀಪ್ ಪೂಜಾರಿ ಅವರ ಸೇವೆ ಮಾನವೀಯ ಸಮಾಜಕ್ಕೆ ಪಾಠವಾಗಿದೆ. ಇಂತಹ ವ್ಯಕ್ತಿಗಳು ಪೊಲೀಸ್ ಇಲಾಖೆಯಲ್ಲಿರುವುದು ತುಂಬಾ ಸಂತೋಷದ ವಿಚಾರ
- ಸತೀಶ್ ಪುತ್ತೂರು,