ಸೂಕ್ತ ದಾಖಲೆಗಳಿದ್ದರೂ ನನ್ನ ಮೇಲೆಯೇ ಗೋಕಳ್ಳತನದ ಜಾಮೀನುರಹಿತ ಸುಳ್ಳು ಪ್ರಕರಣ ದಾಖಲು: ಮುಹಮ್ಮದ್ ಹನೀಫ್ ಆರೋಪ

Update: 2020-06-19 07:49 GMT

ಮಂಗಳೂರು, ಜೂ.19: ''ಸೂಕ್ತ ದಾಖಲೆ ಪತ್ರಗಳೊಂದಿಗೆ ಜಾನುವಾರು ಸಾಗಾಟ ನಡೆಸುತ್ತಿದ್ದ ನನ್ನ ಮೇಲೆ ಉರ್ವಾ ಪೊಲೀಸ್ ಠಾಣೆ ಬಳಿ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ಒದಗಿಸಬೇಕು'' ಎಂದು ಜಾನುವಾರು ವ್ಯಾಪಾರಿ, ಜೋಕಟ್ಟೆಯ ಮುಹಮ್ಮದ್ ಹನೀಫ್ ಗುಡ್ಡೆಮನೆ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ತನ್ನ ಮೇಲಿನ ಹಲ್ಲೆ ಕುರಿತಂತೆ ಮಾತನಾಡಿದ ಅವರು, ''ಘಟನೆ ನಡೆದ ದಿನದಂದು ಪೊಲೀಸರು ನನ್ನಿಂದ ಯಾವುದೇ ಹೇಳಿಕೆ ಪಡೆಯದೆ ಸಿದ್ಧಪಡಿಸಿದ ಹೇಳಿಕೆಗೆ ಸಹಿ ಪಡೆದಿದ್ದರು'' ಎಂದು ಆರೋಪಿಸಿದ್ದಾರೆ.

''ಜಾನುವಾರು ಸಾಗಾಟಕ್ಕೆ ಸಂಬಂಧಿಸಿ ಸೂಕ್ತ ದಾಖಲೆಗಳಿದ್ದರೂ ನನ್ನ ಮೇಲೆಯೇ ಗೋಕಳ್ಳತನದ ಜಾಮೀನುರಹಿತ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ನನ್ನ ಮೇಲೆ 15ರಷ್ಟು ಮಂದಿ ಹಲ್ಲೆ ನಡೆಸಿರುವ ಕುರಿತಂತೆ ಸಿಸಿಟಿವಿ ದಾಖಲೆಗಳೂ ಇವೆ. ಹಾಗಿದ್ದರೂ ಆರು ಮಂದಿಯ ಮೇಲೆ ಮಾತ್ರ ದುರ್ಬಲ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಜೂನ್ 17ರಂದು ಪೊಲೀಸ್ ಠಾಣೆಗೆ ಖುದ್ದು ಲಿಖಿತ ಹೇಳಿಕೆಯನ್ನು ನೀಡಿದ್ದೇನೆ. ಅದನ್ನು ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು'' ಎಂದು ಅವರು ಆಗ್ರಹಿಸಿದರು.

''ಜೂ.13ರಂದು ರಾಣೆಬೆನ್ನೂರಿನಿಂದ 10 ಎಮ್ಮೆಗಳನ್ನು ಖರೀದಿಸಿದ ಕುರಿತು ಅವುಗಳ ಆರೋಗ್ಯ ಮತ್ತು ಅವುಗಳ ಪ್ರಾಯದ ಕುರಿತು ಸ್ಥಳೀಯ ಸರಕಾರಿ ಪಶು ವೈದ್ಯರಿಂದ ದೃಢೀಕರಣ ಪ್ರಮಾಣ ಪತ್ರ ಪಡೆದಿದ್ದೇನೆ. ಅದರಲ್ಲಿ 6 ಎಮ್ಮೆಗಳನ್ನು ಇನ್ನೊಂದು ವಾಹನದಲ್ಲಿ ಜೂ.14ರ ಬೆಳಗ್ಗೆ ಕಸಾಖಾನೆಗೆ ಮಾರಾಟಕ್ಕೆ ಸಾಗಿಸಲಾಗಿತ್ತು. ಇನ್ನೊಂದು ವಾಹನದಲ್ಲಿ ಜೋಕಟ್ಟೆಯ ಮನೆಗೆ ಆಗಮಿಸಿ ಸ್ವಲ್ಪ ವಿಶ್ರಾಂತಿ ಪಡೆದು ಬಳಿಕ ಮಂಗಳೂರಿಗೆ ಹೊರಟಿದ್ದೆ. ಈ ಸಂದರ್ಭ ನನ್ನ ಮೇಲೆ ಸುಮಾರು 15 ಜನರ ಗುಂಪಿನಿಂದ ಹಲ್ಲೆ ನಡೆದಿದೆ. ಈ ಪೈಕಿ ಮೂವರಲ್ಲಿ ಒಬ್ಬನ ಕೈಯ್ಯಲ್ಲಿ ತಲವಾರು, ಇನ್ನೊಬ್ಬನ ಕೈಯಲ್ಲಿ ಕಬ್ಬಿಣದ ರಾಡ್, ಮತ್ತೊಬ್ಬನ ಕೈಯಲ್ಲಿ ಮರದ ಕೋಲು ಇತ್ತು. ಈ ಮೂವರು ನನ್ನನ್ನು ಕೊಲ್ಲುವ ಉದ್ದೇಶದಿಂದ ತಮ್ಮಲ್ಲಿದ್ದ ಆಯುಧಗಳಿಂದ ಹಲ್ಲೆ ನಡೆಸಿದ್ದರು. ಅದೃಷ್ಟವಶಾತ್ ಆ ಸಂದರ್ಭ ಘಟನಾ ಸ್ಥಳಕ್ಕೆ ಉರ್ವ ಠಾಣೆಯ ಪೊಲೀಸರು ಆಗಮಿಸಿದ ಕಾರಣ ನನ್ನ ಪ್ರಾಣ ಉಳಿದಿದೆ. ಘಟನೆಯ ವೇಳೆ ನನ್ನ ವಾಹನ ಸಂಪೂರ್ಣ ಜಖಂಗೊಳಿಸಿರುವುದಲ್ಲದೆ, ನನ್ನ ಜೇಬಿನಲ್ಲಿದ್ದ 7,800 ರೂ. ದೋಚಲಾಗಿದೆ'' ಎಂದು ಮುಹಮ್ಮದ್ ಹನೀಫ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಕೆ. ಅಶ್ರಫ್, ಸಂತ್ರಸ್ತ ಹನೀಫ್‌ರ ಸಹೋದರ ಹೈದರ್ ಜಮಾಅತ್, ಜೋಕಟ್ಟೆ ಗ್ರಾ.ಪಂ. ಉಪಾಧ್ಯಕ್ಷ ಸಂಶುದ್ದೀನ್ ಉಪಸ್ಥಿತರಿದ್ದರು.


ಜಾನುವಾರ ಸಾಗಾಟಕ್ಕೆ ಸ್ಪಷ್ಟ ಮಾರ್ಗಸೂಚಿ ಪ್ರಕಟಿಸಿ

ಜಾನುವಾರು ಸಾಗಾಟಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ ಸ್ಪಷ್ಟ ಮಾರ್ಗಸೂಚಿಯನ್ನು ನೀಡಬೇಕು. ಈ ಹಿಂದಿನ ಜಿಲ್ಲಾಧಿಕಾರಿ ಈ ಬಗ್ಗೆ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸುವುದಾಗಿ ಹೇಳಿದ್ದರು. ಅದನ್ನು ಜಾರಿಗೊಳಿಸಬೇಕು. ಜಾನುವಾರು ಖರೀದಿ, ಮಾರಾಟಕ್ಕೆ ಸಂಬಂಧಿಸಿ ಭಾವನಾತ್ಮಕ ವಿಚಾರವನ್ನು ಮುಂದಿರಿಸಿ ಸಂಘರ್ಷಕ್ಕೆ ಕಾರಣವಾಗುವುದನ್ನು ತಪ್ಪಿಸಲು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜೋಕಟ್ಟೆಯ ಎ.ಕೆ.ಅಶ್ರಫ್ ಒತ್ತಾಯಿಸಿದ್ದಾರೆ.

ಮುಹಮ್ಮದ್ ಹನೀಫ್‌ರವರ ಮೇಲೆ ಜಾನುವಾರು ಕಳ್ಳತನ ಸೇರಿ ವಿವಿಧ ಬ್ರಹ್ಮಾವರ, ಪಣಂಬೂರು ಠಾಣೆಗಳಲ್ಲಿ ಪ್ರರಕರಣಗಳು ದಾಖಲಾಗಿದೆ ಎಂಬುದು ಸುಳ್ಳು ಮಾಹಿತಿ. ಉಪ್ಪಿನಂಗಡಿಯಲ್ಲಿ ದಾಖಲಾಗಿರುವ ಪ್ರಕರಣವೂ ಜಾನುವಾರು ಕಳ್ಳತನದ ಪ್ರಕರಣವಲ್ಲ. ಬದಲಾಗಿ ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಜಾನುವಾರು ಸಾಗಾಟಕ್ಕೆ ಸಂಬಂಧಿಸಿ ದೂರು ದಾಖಲಾಗಿದ್ದು, ಜಾಮೀನು ದೊರಕಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News