ವಂಚನೆ ಪ್ರಕರಣದಲ್ಲಿ ಬಂಧಿತ ಆರೋಪಿಗೆ ಕೊರೋನ ಸೋಂಕು: 11 ಪೊಲೀಸರಿಗೆ ಕ್ವಾರಂಟೈನ್

Update: 2020-06-19 10:28 GMT

ಬೆಂಗಳೂರು, ಜೂ.19: ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧಿತ ನಾಲ್ವರು ಆರೋಪಿಗಳ ಪೈಕಿ ಓರ್ವನಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದ್ದು, ಅವರನ್ನು ಬಂಧಿಸಿ ಕರೆತಂದಿದ್ದ ಪೊಲೀಸರನ್ನು ಕ್ವಾರಂಟೈನ್ ‌ಮಾಡಲಾಗಿದೆ.

ಉದ್ಯಮಿಯ ಬಳಿ ಎರಡು ಕೋಟಿ ರೂ. ಪಡೆದು ದುಪ್ಪಟ್ಟು ಮಾಡಿ ಕೊಡುತ್ತೇವೆ ಎಂದು ವಂಚಿಸಿದ್ದ ಆರೋಪದಲ್ಲಿ ಮಹೇಶ್, ನಾಗರಾಜು, ಗೋಪಾಲ್ ಹಾಗೂ ಶಿವಕುಮಾರ್ ಎಂಬವರನ್ನು ಮಾರತ್​ಹಳ್ಳಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.

 ಈ ಆರೋಪಿಗಳು ಹಣ ಕೊಡಿ ದುಪ್ಪಟ್ಟು ಮಾಡಿಕೊಡುತ್ತೇವೆ ಎಂದು ಉದ್ಯಮಿಯೊಬ್ಬರಿಂದ 2019ರಲ್ಲಿ ಎರಡು ಕೋಟಿ ರೂ. ಪಡೆದಿದ್ದರು. ಒಂದು ವರ್ಷ ಆದರೂ ಹಣವನ್ನು ಕೊಡದೇ ಸತಾಯಿಸುತ್ತಿದ್ದ ಬಗ್ಗೆ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದೂರಿನ ಅನ್ವಯ ಲಾಕ್ ಡೌನ್ ಟೈಂನಲ್ಲಿ ಪೊಲೀಸರು ತಮಿಳುನಾಡಿಗೆ ಹೋಗಿ ನಾಲ್ವರು ಆರೋಪಿಗಳನ್ನು ಬಂಧಿಸಿ ಕರೆತಂದಿದ್ದರು. ನಂತರ ಆರೋಪಿಗಳನ್ನು ಕರೆತಂದು ವಿಚಾರಣೆ ಮಾಡಿದ ಬಳಿಕ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಓರ್ವ ಆರೋಪಿಗೆ ಕೊರೋನ ಸೋಂಕು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಆರೋಪಿಯ ಸಂಪರ್ಕಕ್ಕೆ ಬಂದಿದ್ದ 11 ಜನ ಪೊಲೀಸರನ್ನು ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News