ಉಡುಪಿ ನಗರದ ಯುಜಿಡಿ ಕಾಮಗಾರಿಯಲ್ಲಿ ದೋಷ: ಡಾಮರೀಕರಣ ಮಾಡಿದ ನಾಲ್ಕೇ ತಿಂಗಳಲ್ಲಿ ರಸ್ತೆಗಳು ಸಿಂಕ್ !

Update: 2020-06-19 12:41 GMT

ಉಡುಪಿ, ಜೂ.19: ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದ ಕೊನೆಯ ಕ್ಷಣದಲ್ಲಿ ಒಳಚರಂಡಿ ಕಾಮಗಾರಿಯನ್ನು ಅವಸರವಾಗಿ ನಡೆಸಿದ ಪರಿಣಾಮ, ಕೋಟ್ಯಂತರ ರೂ. ವೆಚ್ಚದಲ್ಲಿ ಡಾಮರೀಕರಣ ಮಾಡಲಾದ ನಗರದ ಕೆಲವು ಪ್ರಮುಖ ರಸ್ತೆಗಳು ಒಂದೇ ಮಳೆಗೆ ಸಿಂಕ್ ಆಗಿವೆ. ನಡು ರಸ್ತೆಯೇ ಒಳಗೆ ಕುಸಿದಿರುವುದರಿಂದ ಇಲ್ಲಿ ವಾಹನ ಸಂಚಾರ ಅಪಾಯಕಾರಿ ಯಾಗಿ ಪರಿಣಮಿಸಿದೆ.

ಕಳೆದ ವರ್ಷದ ಕೊನೆಯಲ್ಲಿ 40ಲಕ್ಷ ರೂ. ವೆಚ್ಚದಲ್ಲಿ ಒಳಚರಂಡಿ ಕಾಮ ಗಾರಿಯನ್ನು ಉಡುಪಿ ನಗರದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಗುತ್ತಿಗೆದಾರರ ವಿಳಂಬ ದಿಂದಾಗಿ ಪರ್ಯಾಯ ಮಹೋತ್ಸವ ಸಮೀಪಿಸುತ್ತಿದ್ದರೂ ಕಿನ್ನಿಮುಲ್ಕಿ ಪ್ರಮುಖ ರಸ್ತೆಯ ಒಳಚರಂಡಿ ಕಾಮಗಾರಿ ಮುಗಿದಿರಲಿಲ್ಲ. ಬಳಿಕ ಜನಪ್ರತಿನಿಧಿಗಳ ಒತ್ತಡದ ಹಿನ್ನೆಲೆಯಲ್ಲಿ ಜ.18ರ ಪರ್ಯಾಯ ಮಹೋತ್ಸವಕ್ಕೆ ಮೊದಲು ಪೂರ್ಣಗೊಳಿಸುವ ಗುರಿಯೊಂದಿಗೆ ಅವಸರವಸರವಾಗಿ ಮುಗಿಸಲಾಯಿತು.

2 ಕೋಟಿ ವೆಚ್ಚದಲ್ಲಿ ಡಾಮರೀಕರಣ

ಪರ್ಯಾಯ ಮಹೋತ್ಸವದ ಪ್ರಯುಕ್ತ ತದನಂತರ ನಗರದ ಎಲ್ಲ ರಸ್ತೆಗಳನ್ನು ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಡಾಮರೀಕರಣ ಮಾಡಲಾಯಿತು. ಅದರಂತೆ ಆಗಷ್ಟೆ ಒಳಚರಂಡಿ ಕಾಮಗಾರಿ ಮುಗಿದ ಕಿನ್ನಿಮುಲ್ಕಿ ಹಾಗೂ ಕಲ್ಸಂಕ -ಗುಂಡಿಬೈಲು ರಸ್ತೆಗಳಿಗೂ ಡಾಮರೀಕ ರಣ ಮಾಡಲಾಗಿತ್ತು. ಹೀಗೆ ಜ.18ರೊಳಗೆ ಡಾಮರೀಕರಣ ಪೂರ್ಣಗೊಳಿಸಿ ನಗರವನ್ನು ಪರ್ಯಾಯ ಮೋತ್ಸವಕ್ಕೆ ಸಜ್ಜುಗೊಳಿಸಲಾಗಿತ್ತು.
ಆದರೆ ರಸ್ತೆ ಡಾಮರೀಕರಣ ಮಾಡಲು, ರಸ್ತೆ ಅಗೆದು ನಿರ್ಮಿಸಿರುವ ಒಳಚರಂಡಿ ಕಾಮಗಾರಿ ಮುಗಿದು ಕನಿಷ್ಟ ಎರಡು ತಿಂಗಳಾದರೂ ಸಮಯ ಬೇಕಾಗಿತ್ತು. ಈ ಬಗ್ಗೆ ಮುತುವರ್ಜಿ ವಹಿಸದೆ ಒತ್ತಡದ ಹಿನ್ನೆಲೆಯಲ್ಲಿ ತುರ್ತಾಗಿ ಡಾಮರೀಕಣ ಮಾಡಿರುವುದರಿಂದ ಒಂದೇ ಮಳೆಗೆ ಕಿನ್ನಿಮುಲ್ಕಿ ಹಾಗೂ ಗುಂಡಿಬೈಲು ರಸ್ತೆಗಳಲ್ಲಿ ಒಳಚರಂಡಿ ಕಾಮಗಾರಿ ಮಾಡಿರುವ ಭಾಗ ಸಂಪೂರ್ಣ ಬಿರುಕು ಬಿಟ್ಟು ಕುಸಿದಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಠೇವಣಿ ಮುಟ್ಟುಗೋಲು

ಕಾಮಗಾರಿಯನ್ನು ಗುತ್ತಿಗೆ ವಹಿಸುವವರಿಂದ ಒಟ್ಟು ವೆಚ್ಚದ ಶೇ.5ರಷ್ಟು ಭದ್ರತಾ ಠೇವಣಿಯನ್ನು ನಗರಸಭೆ ಪಡೆದುಕೊಳ್ಳುತ್ತದೆ. ಅದರಂತೆ 40ಲಕ್ಷ ರೂ. ಮೊತ್ತದ ಒಳಚರಂಡಿ ಕಾಮಗಾರಿಗೆ 2ಲಕ್ಷ ರೂ. ಮತ್ತು 2ಕೋಟಿ ರೂ. ವೆಚ್ಚದ ಡಾಮರೀಕರಣ ಕಾಮಗಾರಿಗೆ 10ಲಕ್ಷ ರೂ. ಭದ್ರತಾ ಠೇವಣಿ ಈಗಾಗಲೇ ನಗರಸಭೆಯ ಕೈಯಲ್ಲಿದೆ.

ಈ ಕಾಮಗಾರಿಯಲ್ಲಿ ಯಾವುದೇ ತೊಂದರೆಯಾದರೂ ಆ ಗುತ್ತಿಗೆದಾರರು ದುರಸ್ತಿ ಮಾಡಿಕೊಡಬೇಕಾಗುತ್ತದೆ. ಇಲ್ಲದಿದ್ದರೆ ಈ ಠೇವಣಿಯನ್ನು ನಗರಸಭೆ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಅದರಂತೆ ಈಗ ಈ ಎರಡು ಗುತ್ತಿಗೆ ದಾರರು ಕಿನ್ನಿಮುಲ್ಕಿ ಮತ್ತು ಗುಂಡಿಬೈಲು ರಸ್ತೆಯ ಒಳಚರಂಡಿ ಮತ್ತು ಡಾಮರೀಕರಣವನ್ನು ದುರಸ್ತಿ ಮಾಡಬೇಕಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ವಾಹನ ಸಂಚಾರಕ್ಕೆ ಅಪಾಯ

ಮಧ್ಯ ರಸ್ತೆಯನ್ನೇ ಅಗೆದು ಒಳಚರಂಡಿ ಕಾಮಗಾರಿ ಮಾಡಿರುವುದರಿಂದ ಕಿನ್ನಿಮುಲ್ಕಿ ರಸ್ತೆಯ ಮಧ್ಯಭಾಗ ಮತ್ತು ಗುಂಡಿಬೈಲು ರಸ್ತೆಯ ಬಲಭಾಗ ಸಿಂಕ್ ಆಗಿದೆ. ಇದರಿಂದ ವಾಹನ ಂಚಾರ ಬಹಳಷ್ಟು ಅಪಾಯಕಾರಿಯಾಗಿದೆ.

ದೂರದಲ್ಲಿ ಸಿಂಕ್ ಆಗಿರುವುದು ಕಂಡುಬಾರದ ಕಾರಣ ಲಘು ವಾಹನ ಗಳಾದ ಕಾರು, ರಿಕ್ಷಾ ಇದರ ಮೇಲೆ ಚಲಿಸಿದರೆ, ಇಡೀ ವಾಹನ ಒಂದು ಬದಿಗೆ ವಾಲಿದಂತಾಗುತ್ತದೆ. ವೇಗದಲ್ಲಿರುವ ವಾಹನ ಇದರಿಂದ ಪಲ್ಟಿಯಾಗುವ ಸಾಧ್ಯತೆ ಕೂಡ ಇದೆ. ಈ ಹಿನ್ನೆಲೆಯಲ್ಲಿ ಇಂದು ಸಿಂಕ್ ಆಗಿರುವ ರಸ್ತೆಯ ಭಾಗಕ್ಕೆ ಡಾಮರು ಮಿಶ್ರಿತ ಜಲ್ಲಿ ಹಾಕಲಾಗಿದೆ. ಅದೇ ರೀತಿ ಎರಡು ಬದಿಗಳಲ್ಲಿಯೂ ಬ್ಯಾರಿಕೇಡ್‌ಗಳನ್ನು ಆಳವಡಿಸಲಾಗಿದೆ.

ಸಿಂಕ್ ಆಗಿರುವ ಕಿನ್ನಿಮುಲ್ಕಿ ಮತ್ತು ಗುಂಡಿಬೈಲು ರಸ್ತೆ ದುರಸ್ತಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಸದ್ಯ ಸಂಚಾರಕ್ಕೆ ಅಪಾಯ ಆಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿ, ಬ್ಯಾರಿಕೇಡ್ ಆಳವಡಿಸಲಾಗಿದೆ. ಶೀಘ್ರವೇ ಇದರ ದುರಸ್ತಿ ಮಾಡಲಾಗುವುದು. ಈ ಸಂಬಂಧ ಕಾಮಗಾರಿ ಆರಂಭಕ್ಕೆ ಮುನ್ನ ಗುತ್ತಿಗೆದಾರರಿಂದ ಭದ್ರತಾ ಠೇವಣಿಯನ್ನು ಕೂಡ ಪಡೆದುಕೊಳ್ಳಲಾಗಿದೆ.
-ಮೋಹನ್‌ರಾಜ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ನಗರಸಭೆ, ಉಡುಪಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News