ಕೆಪಿಎಸ್‍ಸಿ ನೇಮಕಾತಿ ಆದೇಶ: ಅರ್ಜಿ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ- ಹೈಕೋರ್ಟ್

Update: 2020-06-19 15:20 GMT

ಬೆಂಗಳೂರು, ಜೂ.19: ಕೆಪಿಎಸ್‍ಸಿ 2015ನೆ ಸಾಲಿನ ಗೆಜೆಟೆಡ್ ಪ್ರೊಬೆಷನರಿ 428 ಹುದ್ದೆಗಳ ನೇಮಕಾತಿ ಆದೇಶ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಸಲ್ಲಿಕೆಯಾಗಿದ್ದ ತಕರಾರು ಅರ್ಜಿ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸರಕಾರಕ್ಕೆ ನಿರ್ದೇಶಿಸಬೇಕು ಹಾಗು ಅಂತಿಮ ಆಯ್ಕೆ ಪಟ್ಟಿಗೆ ತಡೆ ನೀಡಬೇಕು ಎಂದು ಕೋರಿ ಬಿ.ಕೆ.ಸುಧನ್ವ ಬಂಡೋಲ್ಕರ್ ಸೇರಿ 14 ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅರವಿಂದ್‍ಕುಮಾರ್ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಕೆಪಿಎಸ್‍ಸಿ ಪರೀಕ್ಷೆಯ ಡಿಜಿಟಲ್ ಮೌಲ್ಯ ಮಾಪನದ ದತ್ತಾಂಶ ಹಾಗೂ ಲಿಖಿತ ಪರೀಕ್ಷೆ ಉತ್ತರ ಪತ್ರಿಕೆ, ಸಿಸಿಟಿವಿಯಲ್ಲಿ ಸಂಗ್ರಹವಾಗಿರುವ ದೃಶ್ಯ, ಡಿಜಿಟಲ್ ಮೌಲ್ಯಮಾಪನಕ್ಕೆ ಬಳಸಿರುವ ಸಾಫ್ಟ್‍ವೇರ್ ಗಳನ್ನು ಮುಂದಿನ ವಿಚಾರಣೆವರೆಗೂ ಸಂರಕ್ಷಿಸಿಡಬೇಕೆಂದು ಸರಕಾರ ಹಾಗೂ ಕೆಪಿಎಸ್‍ಸಿಗೆ ನ್ಯಾಯಪೀಠವು ಸೂಚಿಸಿತು. ಆಕ್ಷೇಪಣೆ ಸಲ್ಲಿಸಲು 2 ವಾರ ಕಾಲಾವಕಾಶ ನೀಡುವಂತೆ ಕೆಪಿಎಸ್‍ಸಿ ಪರ ವಕೀಲರ ಮನವಿ ಪುರಸ್ಕರಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News