ಅಮೂಲ್ಯ ವಿರುದ್ಧ ವಾದಿಸಲು ವಿಶೇಷ ಅಭಿಯೋಜಕರನ್ನು ನೇಮಿಸಿದ ಸರಕಾರ

Update: 2020-06-20 16:38 GMT
File Photo

ಬೆಂಗಳೂರು, ಜೂ.20: ಸಿಎಎ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ ಲಿಯೋನ್ ಪ್ರಕರಣದಲ್ಲಿ, ಆಕೆಯ ವಿರುದ್ಧ ವಾದಿಸಲು ವಕೀಲ ಐ.ಎಸ್ ಪ್ರಮೋದ್ ಚಂದ್ರ ಅವರನ್ನು ವಿಶೇಷ ಅಭಿಯೋಜಕರಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಈ ಕುರಿತು ಪೊಲೀಸ್ ಸೇವೆ ಮತ್ತು ಒಳಾಡಳಿತ ಇಲಾಖೆ ಅಧೀನ ಕಾರ್ಯದರ್ಶಿ ಜಿ. ಶ್ಯಾಮ್ ಹೊಳ್ಳ ಅವರು ಅಧಿಸೂಚನೆ ಹೊರಡಿಸಿದ್ದು, ದಂಡ ಪ್ರಕ್ರಿಯೆ ಸಂಹಿತೆ 1975ರ ಕಲಂ 24ರ ಉಪ ಕಲಂ 8ರ ಅಡಿಯಲ್ಲಿ ವಿಶೇಷ ಅಭಿಯೋಜಕರ ಹುದ್ದೆಗೆ ಪ್ರಮೋದ್ ಚಂದ್ರ ಅವರನ್ನು ನಿಯೋಜಿಸಿರುವುದಾಗಿ ತಿಳಿಸಿದ್ದಾರೆ.

ಅಮೂಲ್ಯ ವಿರುದ್ಧ ಉಪ್ಪಾರಪೇಟೆ ಠಾಣೆ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಪ್ರಮೋದ್ ಚಂದ್ರ ಅವರು ಜೆಎಂಎಫ್‍ಸಿ ಮತ್ತು ಸೆಷನ್ಸ್ ಕೋರ್ಟ್ ಗಳಲ್ಲಿ ಅಭಿಯೋಜನೆ ಪರ ವಾದ ಮಂಡಿಸಲಿದ್ದಾರೆ.

ಪ್ರಕರಣದ ಹಿನ್ನೆಲೆ: ಫೆ.20 ರಂದು ಕೆಲ ಸಂಘಟನೆಗಳು ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಮೂಲ್ಯ ಲಿಯೋನ್ ಅಲ್ಲಿಗೆ ತೆರಳಿ ಪಾಕಿಸ್ತಾನ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದಳು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡು, ಅಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News