ಮಂಗಳೂರು: ಮಾರುಕಟ್ಟೆಗೆ ಮಾಂಸ ಸಾಗಾಟಕ್ಕೆ ಅಡ್ಡಿ; ವಾಹನ ಚಾಲಕನಿಗೆ ಹಲ್ಲೆ

Update: 2020-06-21 04:45 GMT

ಮಂಗಳೂರು, ಜೂ.21: ಕುದ್ರೋಳಿಯ ವಧಾಗೃಹದಿಂದ ಕಂಕನಾಡಿಯ ಮಾರುಕಟ್ಟೆಗೆ ಪರವಾನಿಗೆ ಸಹಿತ ಮಾಡಲಾಗುತ್ತಿದ್ದ ಮಾಂಸ ಸಾಗಾಟಕ್ಕೆ ಅಡ್ಡಿಪಡಿಸಿ, ಚಾಲಕನಿಗೆ ಹಲ್ಲೆಗೈದ ಕೃತ್ಯ ರವಿವಾರ ಬೆಳಗ್ಗೆ ಕಂಕನಾಡಿ ಬಳಿ ನಡೆದಿದೆ.

ಕುದ್ರೋಳಿಯ ರಶೀದ್ ಎಂಬವರು ತನ್ನ ರಿಕ್ಷಾ ಟೆಂಪೋದಲ್ಲಿ ಕಂಕನಾಡಿ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಹೊಂದಿರುವ ಝಾಕಿರ್ ಎಂಬವರ ಅಂಗಡಿಗೆ ಸುಮಾರು 200 ಕೆಜಿಯಷ್ಟು ದನದ ಮಾಂಸವನ್ನು ಪರವಾನಿಗೆ ಸಹಿತ ಸಾಗಾಟ ಮಾಡುತ್ತಿದ್ದರು. ಈ ವೇಳೆ ಸುಮಾರು ಐದಾರು ಮಂದಿಯನ್ನೊಳಗೊಂಡ ದುಷ್ಕರ್ಮಿಗಳ ತಂಡವು ಕಾರು ಮತ್ತು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ಹೈಲ್ಯಾಂಡ್ ಆಸ್ಪತ್ರೆ-ಕಂಕನಾಡಿ ಮಾರುಕಟ್ಟೆ ರಸ್ತೆ ಮಧ್ಯೆ ರಿಕ್ಷಾ ಟೆಂಪೋವನ್ನು ತಡೆದು ನಿಲ್ಲಿಸಿತು. ಬಳಿಕ ಚಾಲಕ ರಶೀದ್‌ಗೆ ಹಲ್ಲೆಗೈದು, ರಿಕ್ಷಾ ಟೆಂಪೋಗೆ ಹಾನಿಗೈದರಲ್ಲದೆ ಮಾಂಸಕ್ಕೆ ಸೀಮೆಎಣ್ಣೆ ಸುರಿದಿದ್ದಾರೆ. ಈ ಸಂದರ್ಭ ದಾರಿಹೋಕರು ಜಮಾಯಿಸುವುದನ್ನು ಕಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಕದ್ರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. 

 * ಕುದ್ರೋಳಿ ವಧಾಗೃಹದಿಂದ  ಪರವಾನಿಗೆ ಪಡೆದು ಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ನಿಲ್ಲಿಸಿ ಅಡ್ಡಿಪಡಿಸಿದ ದುಷ್ಕರ್ಮಿಗಳ ಕೃತ್ಯವನ್ನು ಮಾಂಸ ವ್ಯಾಪಾರಸ್ಥರ ಸಂಘ ಹಾಗೂ ಕಂಕನಾಡಿ ಮಾರುಕಟ್ಟೆ ಸಂಘದ ಅಧ್ಯಕ್ಷ ‌ಅಲಿ ಹಸನ್ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News