ಉಡುಪಿಯಲ್ಲಿ ಶೇ.40ರಷ್ಟು ಪಾರ್ಶ್ವ ಸೂರ್ಯಗ್ರಹಣ ಗೋಚರ

Update: 2020-06-21 14:26 GMT

ಉಡುಪಿ, ಜೂ.21: ಈ ವರ್ಷದ ಮೊದಲ ಅಪರೂಪದ ಪಾರ್ಶ್ವ ಸೂರ್ಯ ಗ್ರಹಣವು ಉಡುಪಿಯಲ್ಲಿ ಜೂ.21ರಂದು ಬೆಳಗ್ಗೆ 11.27ರ ಸುಮಾರಿಗೆ ಶೇ.40.38ರಷ್ಟು ಗರಿಷ್ಠ ಸ್ಥಿತಿಯಲ್ಲಿ ಗೋಚರವಾಗಿದೆ.

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ನಿಖರವಾದ ರೇಖೆಯಲ್ಲಿ ಬಂದಾಗ ಈ ಸೂರ್ಯಗ್ರಹಣ ಸಂಭವಿಸಿದೆ. ಉಡುಪಿಯಲ್ಲಿ ಬೆಳಗ್ಗೆ 10.04ಕ್ಕೆ ಗ್ರಹಣ ಪ್ರಾರಂಭವಾಗಿದ್ದು, ಆಗಾಗ ಬರುತ್ತಿದ್ದ ಮೋಡಗಳಿಂದ ನಿರಂತರ ಗ್ರಹಣ ವೀಕ್ಷಣೆಗೆ ಅಡಚಣೆಯಾಗುತ್ತಿತ್ತು.

ಗ್ರಹಣ ಆರಂಭ ಮತ್ತು ಗ್ರಹಣದ ಗರಿಷ್ಠ ಸ್ಥಿತಿಯ ಸಂದರ್ಭ ಬಿಸಿಲು ಇದ್ದ ಕಾರಣ ಸೂರ್ಯಗ್ರಹಣ ಸ್ಪಷ್ಟವಾಗಿ ಗೋಚರವಾಯಿತು. ಹವಾಮಾನ ಅಡಚಣೆಯಿಂದ ಗ್ರಹಣ ಮುಕ್ತಾಯ ಸಮಯ ಮಧ್ಯಾಹ್ನ 1:22ಕ್ಕೆ ಎಂಬುದು ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸಂಯೋಜಕ ಅತುಲ್ ಭಟ್ ತಿಳಿಸಿದ್ದಾರೆ.

ನೇರ ಪ್ರಸಾರದ ವ್ಯವಸ್ಥೆ: ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಆವರಣದಲ್ಲಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದಿಂದ ಸೂರ್ಯ ಗ್ರಹಣವನ್ನು ಟೆಲಿಸ್ಕೋಪ್ ಫಿಲ್ಟರ್, ಕನ್ನಡಕ ಮತ್ತು ವೆಲ್ಡಿಂಗ್ ಗ್ಲಾಸ್ ಮೂಲಕ ವೀಕ್ಷಿಸಲಾಯಿತು.

ಕೊರೋನ ಭೀತಿಯ ಹಿನ್ನೆಲೆಯಲ್ಲಿ ಈ ಬಾರಿ ಸೂರ್ಯಗ್ರಹಣ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿರಲಿಲ್ಲ. ಆದುದರಿಂದ ಆಸಕ್ತರು ಮನೆಯಲ್ಲಿ ಕುಳಿತು ಗ್ರಹಣ ವೀಕ್ಷಿಸಲು ಅನುಕೂಲವಾಗುವಂತೆ ಯೂಟ್ಯೂಬ್, ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ನೇರ ಪ್ರಸಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ನೂರಾರು ಮಂದಿ ಆಸಕ್ತರು ಸೂರ್ಯಗ್ರಣ ವನ್ನು ಈ ಮೂಲಕ ವೀಕ್ಷಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಸ್ಥಾಪಕ ಸಂಯೋಜಕ ಡಾ.ಪಿ.ಭಟ್, ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ., ಭೌತಶಾಸ್ತ್ರದ ವಿಭಾಗದ ಮುಖ್ಯಸ್ಥೆ ಪ್ರತಿಭಾ ಸಿ. ಆಚಾರ್ಯ, ಸಂಘದ ಸಂಯೋಜಕ ಅತುಲ್ ಭಟ್, ಹವ್ಯಾಸಿ ಖಗೋಳ ಶಾಸ್ತ್ರಜ್ಞ ರಾಮದಾಸ್ ಪ್ರಭು ಮತ್ತು ಪಿಎಎಸಿ ವಿದ್ಯಾರ್ಥಿ ಮುಹಮ್ಮದ್ ಹಾಶಿಮ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News