ಸೂರ್ಯಗ್ರಹಣ: ಉಡುಪಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಕಾಪು ಮಸೀದಿಯಲ್ಲಿ ನಮಾಝ್

Update: 2020-06-21 14:30 GMT

ಉಡುಪಿ, ಜೂ. 21: ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ರವಿವಾರ ಉಡುಪಿ ಶ್ರೀಕೃಷ್ಣ ಮಠ ಸಹಿತ ವಿವಿಧ ದೇವಸ್ಥಾನಗಲ್ಲಿ ವಿಶೇಷ ಪೂಜೆ ಹಾಗೂ ಕಾಪು ಪೊಲಿಪು ಜುಮಾ ಮಸೀದಿಯಲ್ಲಿ ವಿಶೇಷ ನಮಾಝ್ ನೆರವೇರಿಸಲಾಯಿತು.

ಶ್ರೀಕೃಷ್ಣಮಠದಲ್ಲಿ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಗ್ರಹಣ ಆರಂಭವಾಗುವ ಮುನ್ನ ಹಾಗೂ ಗ್ರಹಣಾನಂತರ ವಿವಿಧ ಪೂಜೆಗಳನ್ನು ನೆರವೇರಿಸಿದರು. ಗ್ರಹಣದ ಮಧ್ಯಭಾಗದಲ್ಲಿ ಸ್ವಾಮೀಜಿ ಆರತಿ ಯನ್ನು ಬೆಳಗಿದರು. ಗ್ರಹಣದ ಅವಧಿಯಲ್ಲಿ ಉಡುಪಿಯ ವಿವಿಧ ಮಠಗಳಲ್ಲಿ ಸ್ವಾಮೀಜಿಗಳು ಜಪತರ್ಪಣಗಳನ್ನು ನಡೆಸಿದರು. ಉಡುಪಿ ಶ್ರೀಅನಂತೇಶ್ವರ, ಚಂದ್ರ ಮೌಳೀಶ್ವರ ಸಹಿತ ಎಲ್ಲ ದೇವಸ್ಥಾನಗಳಲ್ಲಿ ಬೆಳಗ್ಗೆ ಪೂಜೆಗಳನ್ನು ನಡೆಸಲಾಯಿತು.

ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ಕಾಪು ಪೊಲಿಪು ಜಾಮಿಯ ಮಸೀದಿಯಲ್ಲಿ ಖತೀಬ್ ಇರ್ಷಾದ್ ಸಅದಿ ನೇತೃತ್ವದಲ್ಲಿ ವಿಶೇಷ ನಮಾಝ್ ಮತ್ತು ಪ್ರಾರ್ಥನೆ ನೆರವೇರಿಸಲಾಯಿತು. ಬಳಿಕ ಮಾತನಾಡಿದ ಅವರು, ಗ್ರಹಣಕ್ಕೆ ಸಂಬಂಧಿಸಿದ ಮೂಢನಂಬಿಕೆಯನ್ನು ಇಸ್ಲಾಂ ವಿರೋಧಿಸುತ್ತದೆ ಮತ್ತು ಇದಕ್ಕೆ ಅವಕಾಶವನ್ನೂ ನೀಡುವುದಿಲ್ಲ ಎಂದರು.

ಸೂರ್ಯಗ್ರಹಣದ ಅವಧಿಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಜನ ಹಾಗೂ ವಾಹನ ಸಂಚಾರ ತೀರಾ ವಿರಳವಾಗಿರುವುದು ಕಂಡುಬಂತು. ಗ್ರಹಣದ ಭೀತಿಯಿಂದ ಜನ ಹೊರಗಡೆ ಬಾರದೆ ಮನೆಯಲ್ಲಿ ಉಳಿದುಕೊಂಡಿದ್ದರು. ಬಹುತೇಕ ಅಂಗಡಿಗಳು ಬಂದ್ ಆಗಿದ್ದವು. ಹೊಟೇಲ್‌ಗಳು ಕೂಡ ತೆರೆದಿರಲಿಲ್ಲ. ಉಡುಪಿ ನಗರ ಜನ ಹಾಗೂ ವಾಹನಗಳಿಲ್ಲದೇ ಬಿಕೋ ಎನ್ನುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News