ಕೆಎಸ್ ಸಿಸಿಯ ಪ್ರಯತ್ನದಿಂದ ಶಾರ್ಜಾದಿಂದ ಚಾರ್ಟರ್ಡ್ ವಿಮಾನ: ಮಂಗಳೂರಿಗೆ ಬಂದ 179 ಅನಿವಾಸಿ ಕನ್ನಡಿಗರು

Update: 2020-06-21 15:15 GMT

ಮಂಗಳೂರು,ಜೂ.21: ಕರ್ನಾಟಕ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ಕೆಎಸ್ ಸಿಸಿ) ಪ್ರಯತ್ನದ ಫಲವಾಗಿ ಮೊದಲನೇ ಖಾಸಗಿ ಚಾರ್ಟರ್ಡ್ ವಿಮಾನವು ದುಬೈ ಮೂಲದ ಅನಿವಾಸಿ ಕನ್ನಡಿಗರನ್ನು ಹೊತ್ತು ಶಾರ್ಜಾ ವಿಮಾನ ನಿಲ್ದಾಣದಿಂದ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. 

ವಿಮಾನದಲ್ಲಿ 29 ಗರ್ಭಿಣಿಯರು, 5 ನವಜಾತ ಶಿಶು, 16 ಮಕ್ಕಳು, ಹಿರಿಯ ನಾಗರಿಕರು, ತುರ್ತು ಚಿಕಿತ್ಸಾ ರೋಗಿಗಳು, ಸಂದರ್ಶನ ವಿಸಾದಲ್ಲಿ ಉಳಿದುಕೊಂಡವರು, ಉದ್ಯೊಗ ಕಳೆದುಕೊಂಡವರು, ತಾಯ್ನಾಡಿನಲ್ಲಿ ಮರಣ ಹೊಂದಿದ ವ್ಯಕ್ತಿಯ ಕುಟುಂಬಸ್ಥರು ಸೇರಿದಂತೆ 179 ಪ್ರಯಾಣಿಕರಿದ್ದರು. ಶಾರ್ಜಾ ಮೂಲದ ಏರ್ ಅರೇಬಿಯಾ ವಿಮಾನದ ಮೂಲಕ ಶಾರ್ಜಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಹೊರಟಿದ್ದು, ಸುಮಾರು 11 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದೆ.

ಅನಿವಾಸಿ ಕನ್ನಡಿಗರಿಗೆ ಖಾಸಗಿ ಚಾರ್ಟರ್ಡ್ ವಿಮಾನ ಸೌಲಭ್ಯವನ್ನು ಒದಗಿಸುವಲ್ಲಿ ಎಲ್ಲಾ ಭಾರತೀಯ ಪ್ರಾಧಿಕಾರ ಸಂಸ್ಥೆಗಳೂ ಉತ್ತಮ ಸಹಕಾರ ನೀಡಿರುವುದಾಗಿ ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್ ಮ್ಯಾನೇಜರ್ ಮುಹಮ್ಮದ್ ಶಫಿ ತಿಳಿಸಿದ್ದಾರೆ. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಎಸ್ ಸಿಸಿ ಯ ಹೆಲ್ಪ್ ಡೆಸ್ಕ್ ತಂಡವು ನಿರಂತರ ಕಾರ್ಯನಿರ್ವಹಿಸಿದ್ದು, ಟಿಕೆಟ್ ಮೊತ್ತ ಹೊಂದಿಸಲು ಅಶಕ್ತರಾದ ಪ್ರಯಾಣಿಕರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ಒದಗಿಸಿದ್ದು, ಸುರಕ್ಷತೆಯ ನಿಟ್ಟಿನಲ್ಲಿ ಎಲ್ಲಾ ಪ್ರಯಾಣಿಕರಿಗೂ ಲಘು ಉಪಹಾರದೊಂದಿಗೆ ಸುರಕ್ಷಾ ಕವಚವನ್ನೊಳಗೊಂಡ ಪಿಪಿಇ ಕಿಟ್ ಉಚಿತವಾಗಿ ಒದಗಿಸಲಾಗಿದೆ ಎಂದು ತಿಳಿಸಿದರು.

ಎಲ್ಲಾ ಪ್ರಯಾಣಿಕರಿಗೂ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೋವಿಡ್ 19 ಟೆಸ್ಟ್ ನಡೆಸಲಾಗಿದ್ದು, ಮಂಗಳೂರಿನ ಮೂರು ಹೋಟೇಲ್ ಗಳಲ್ಲಿ ಕ್ವಾರಂಟೈನ್ ಸೌಲಭ್ಯವನ್ನೂ ಮಾಡಲಾಗಿತ್ತು. ಅನಿವಾಸಿ ಕನ್ನಡಿಗರಿಗೆ ಚಾರ್ಟೆಡ್ ವಿಮಾನ ಸೌಲಭ್ಯವನ್ನು ಒದಗಿಸಲು ಸಹಕರಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ಕಮಿಷನರ್, ಸಾಮಾಜಿಕ ಕಾರ್ಯಕರ್ತರಾದ ಉಮರ್ ಯು.ಎಚ್, ಅಥಾವುಲ್ಲಾ ಜೋಕಟ್ಟೆಯವರಿಗೂ ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್ ನ ಪರವಾಗಿ ಕೃತಜ್ಞತೆ ಮತ್ತು ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸೇವೆಗಾಗಿ ಕರ್ನಾಟಕ ಸ್ಪೊರ್ಟ್ಸ್ & ಕಲ್ಚರಲ್ ಕ್ಲಬ್ ನ ಪದಾಧಿಕಾರಿಗಳಾದ ಶಫಿ, ಅಲ್ತಾಫ್, ಜಾವೇದ್, ನಾಸಿರ್ ಸೇರಿದಂತೆ ಸಂಸ್ಥೆಯ ಸ್ವಯಂ ಸೇವಕರು ಉಪಸ್ಥಿತರಿದ್ದರು.

ಯುಎಇಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕೆಎಸ್ ಸಿಸಿ ದುಬೈ ಕಮ್ಯೂನಿಟಿ ಡೆವಲಪ್ಮೆಂಟ್ ಅಥಾರಿಟಿಯಲ್ಲಿ ನೋಂದಾಯಿತ ಸಾಮಾಜಿಕ ಸಂಸ್ಥೆಯಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ಅನಿವಾಸಿ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News