ಕೊರೋನ ವೈರಸ್ ನಿಯಂತ್ರಿಸುವಲ್ಲಿ ಸರಕಾರ ವಿಫಲ: ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಆರೋಪ

Update: 2020-06-22 16:45 GMT

ಮಂಗಳೂರು, ಜೂ.22: ಕೊರೋನ ವೈರಸ್ ರೋಗ ನಿಯಂತ್ರಿಸುವಲ್ಲಿ ಮತ್ತು ಆ ಬಳಿಕದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ವಿವಿಧ ವಿಭಾಗಗಳ ಜನರಿಗೆ ಸರಕಾರ ಘೋಷಿಸಿದ ಪ್ಯಾಕೇಜ್‌ಗೆ ಸಂಬಂಧಿಸಿದಂತೆ ಈ ತನಕ ಫಲಾನುಭವಿಗಳನ್ನು ಗುರುತಿಸುವ ಕೆಲಸ ಕೂಡ ನಡೆದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಆರೋಪಿಸಿದ್ದಾರೆ.

ನಗರದ ಕದ್ರಿಯಲ್ಲಿರುವ ಸರಕಾರಿ ಅತಿಥಿಗೃಹದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೊರೋನ ಪರೀಕ್ಷಾ ಕೇಂದ್ರಗಳನ್ನು ತೆರೆಯಲಿಲ್ಲ. ಉದಾಹರಣೆಗೆ ಚಿಕ್ಕಮಗಳೂರಿನಲ್ಲಿ ಪರೀಕ್ಷಾ ಕೇಂದ್ರವೇ ಇಲ್ಲ. ಅಲ್ಲಿನ ಶಂಕಿತರ ಮಾದರಿ ಗಳನ್ನು ಹಾಸನಕ್ಕೆ ಕಳುಹಿಸಲಾಗುತ್ತಿದೆ. ಮಂಗಳೂರಿನಲ್ಲಿ 13 ವೆಂಟಿಲೇಟರ್‌ಗಳು ಮಾತ್ರ ಇವೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಮಿಕರಿಗೆ ತಲಾ 2,000 ರೂ. ಪರಿಹಾರ ಘೋಷಿಸಿದ್ದರು. ಆ ಮೊತ್ತ ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಿದೆಯೇ ಖಾತರಿಪಡಿಸಿಕೊಳ್ಳುವ ಮೊದಲೇ ಮತ್ತೆ 2,000 ರೂ ಘೋಷಿಸಿದರು. ದ.ಕ.ಜಿಲ್ಲೆಯಲ್ಲಿ ಸವಿತಾ ಸಮಾಜದ 200 ಫಲಾನುಭವಿ ಗಳನ್ನು ಮಾತ್ರ ಗುರುತಿಸಲಾಗಿದೆ ಎಂದು ಭೋಜೇಗೌಡ ಹೇಳಿದರು.

ರೈತರು, ಕೂಲಿ ಕಾರ್ಮಿಕರು, ಕ್ಷೌರಿಕರು, ರಿಕ್ಷಾ ಚಾಲಕರ ಸಹಿತ ವಿವಿಧ ವರ್ಗದ ಜನರಿಗೆ ಸರಕಾರ ಘೋಷಿಸಿದ ಪರಿಹಾರ ಪ್ಯಾಕೇಜ್ ಘೋಷಣೆಯಾಗಿಯೇ ಉಳಿದಿದೆ. ಪರಿಹಾರ ಪಡೆಯಲು ಬಿಪಿಎಲ್ ಕಾರ್ಡ್, ಆಧಾರ್, ಬ್ಯಾಂಕ್ ಖಾತೆ ವಿವರ ನೀಡಬೇಕು ಎಂಬುದರ ಸಹಿತ ವಿವಿಧ ಮಾನದಂಡಗಳನ್ನು ವಿಧಿಸಲಾಗುತ್ತಿದೆ. ಸರಕಾರ ತಕ್ಷಣ ಅರ್ಹ ಲಾನುಭವಿಗಳ ಬ್ಯಾಂಕ್ ಖಾತೆ ವಿವರ ಪಡೆಯದೇ ಚೆಕ್ ಮೂಲಕ ಹಣದ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಭತ್ತೆ ವಾಪಸ್ ಸರಿಯಲ್ಲ: ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆ ಮತ್ತು ಪಿಯುಸಿ ಶಿಕ್ಷಕರ ವಿಶೇಷ ಭತ್ತೆಯನ್ನು ವಾಪಸ್ ಪಡೆಯುವ ರಾಜ್ಯ ಸರಕಾರದ ತೀರ್ಮಾನವು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಎಲ್ಲ ಅರ್ಹ ಶಿಕ್ಷಕರಿಗೆ ವಿಶೇಷ ಭತ್ತೆ ಒದಗಿಸಬೇಕು. ಇಲ್ಲದಿದ್ದರೆ ಸರಕಾರದ ತೀರ್ಮಾನವನ್ನು ನ್ಯಾಯಾಲಯದಲ್ಲೇ ಪ್ರಶ್ನಿಸಲಾಗುವುದು ಎಂದು ಭೋಜೇಗೌಡ ಎಚ್ಚರಿಸಿದರಲ್ಲದೆ, ಆಶಾ ಕಾರ್ಯಕರ್ತರಿಗೆ ಘೋಷಿಸಿದ ಪರಿಹಾರಧನವನ್ನು ಡಿಸಿಸಿ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್‌ಗಳು ಭರಿಸಬೇಕು ಎಂದು ಸೂಚಿಸಲಾಗಿದೆ. ನಷ್ಟದಲ್ಲಿರುವ ಬ್ಯಾಂಕ್‌ಗಳು ಈ ಹಣವನ್ನು ಹೇಗೆ ಭರಿಸಬೇಕು ಎಂದು ಪ್ರಶ್ನಿಸಿದರು.

2008ರ ಆ.1ರ ಮೊದಲು ನೇಮಕ ನೇಮಕಗೊಂಡಿದ್ದ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆ ಮತ್ತು ಪಿಯುಸಿ ಶಿಕ್ಷಕರಿಗೆ ವಿಶೇಷ ಭತ್ತೆ ನೀಡಲು ಸರಕಾರ ತೀಮಾನಿಸಿತ್ತು. ಅದರಂತೆ ಸುಮಾರು 8 ಕೋ.ರೂ. ಬಿಡುಗಡೆಯನ್ನೂ ಮಾಡಿತ್ತು. ಇತರ ಶಿಕ್ಷಕರು ಕೂಡ ನ್ಯಾಯಾಲಯದ ಮೆಟ್ಟಿಲು ಏರಿ ತಮಗೂ ವಿಶೇಷ ಭತ್ತೆ ಸಿಗಬೇಕು ಎನ್ನುವ ಅವರ ಕಾನೂನು ಹೋರಾಟಕ್ಕೆ ಗೆಲುವು ದೊರೆತಿದೆ. ನ್ಯಾಯಾಲಯದ ಆದೇಶದ ಬಳಿಕ ಸರಕಾರವು ಬಾಕಿ ಇರುವ ಶಿಕ್ಷಕರಿಗೆ ವಿಶೇಷ ಭತ್ತೆ ವಿತರಿಸುವ ಬದಲು ಈಗಾಗಲೇ ವಿತರಿಸಿದ ಭತ್ತೆಯನ್ನು ವಾಪಸ್ ಪಡೆಯಲು ಮುಂದಾಗಿದೆ. ಇದು ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂದು ಭೋಜೇಗೌಡ ಆರೋಪಿಸಿದ್ದಾರೆ.

ಶಾಲಾರಂಭಕ್ಕೆ ಸಮಯ ಸೂಕ್ತವಲ್ಲ: ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಆರಂಭಿಸಿದರೆ ಮಕ್ಕಳು, ಪೋಷಕರು ಆತಂಕಕ್ಕೆ ಒಳಗಾಗುತ್ತಾರೆ. ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ವೇತನ ನೀಡುವುದು ಸರಕಾರ, ಶಾಲೆಗಳ ಆಡಳಿತ ಮಂಡಳಿಯ ಸಮಾನ ಜವಾಬ್ದಾರಿಯಾಗಿದೆ. ಆರ್‌ಟಿಇನಲ್ಲಿ ಬಾಕಿ ಇರುವ 680 ಕೋ.ರೂ. ಹಣವನ್ನು ಸರಕಾರ ಶಾಲೆಗಳಿಗೆ ತಕ್ಷಣ ಬಿಡುಗಡೆ ಮಾಡಬೇಕು. ಬಳಿಕ ಶಿಕ್ಷಕರಿಗೆ ವೇತನ ನೀಡುವಂತೆ ಶಾಲೆಗಳಿಗೆ ಸೂಚಿಸಬೇಕು. ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಸರಕಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಭೋಜೇಗೌಡ ಒತ್ತಾಯಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News