ಮಂಗಳೂರು : ಕೊರೋನ ಪಾಸಿಟಿವ್‌ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ

Update: 2020-06-23 14:46 GMT
ಬಂದರ್ ದಕ್ಕೆ

ಮಂಗಳೂರು, ಜೂ.23: ಕೊರೋನ ಸೋಂಕಿನಿಂದ ಮೃತಪಟ್ಟ 70 ವರ್ಷದ ವ್ಯಕ್ತಿಯ ಮೃತದೇಹವನ್ನು ಮಂಗಳವಾರ ಸಂಜೆ ಬೋಳಾರದ ಜುಮಾ ಮಸ್ಜಿದ್ ಆವರಣದಲ್ಲಿರುವ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಕೊರೋನ ಸೋಂಕಿನಿಂದ ಮುಸ್ಲಿಮರು ಮೃತಪಟ್ಟರೆ ನಗರದ ಬಂದರ್‌ನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸ್ಜಿದ್ ವಠಾರದ ದಫನ ಭೂಮಿಯಲ್ಲಿ ದಫನ ಮಾಡಲು ಅವಕಾಶ ಮಾಡಿಕೊಡುವುದಾಗಿ ಝೀನತ್ ಬಕ್ಷ್ ಆಡಳಿತ ಕಮಿಟಿಯು ಆರಂಭದಲ್ಲೇ ಘೋಷಿಸಿತ್ತು.
ಆದರೆ ಇದೀಗ ಮಳೆಗಾಲದಲ್ಲಿ ಇಲ್ಲಿನ ದಫನಗುಂಡಿಯಲ್ಲಿ ನೀರು ಹರಿದು ಬರುವ ಕಾರಣ ಸಮಸ್ಯೆಯಾಗುತ್ತಿದೆ. ಅಂದರೆ ಮಳೆಗಾಲದಲ್ಲಿ ಆರು ಅಡಿಯ ಬದಲು ಕನಿಷ್ಠ 16 ಅಡಿ ಆಳದವರೆಗೆ ಗುಂಡಿ ತೋಡಬೇಕಾಗಿತ್ತು. ಆ ಹಿನ್ನೆಲೆಯಲ್ಲಿ ಶಾಸಕ ಯುಟಿ ಖಾದರ್, ಝೀನತ್ ಬಕ್ಷ್ ಜುಮಾ ಮಸೀದಿಯ ಅಧ್ಯಕ್ಷ ಯೆನೆಪೊಯ ಅಬ್ದುಲ್ಲ ಕುಂಞಿ, ಎಸ್‌ಎಂಆರ್ ರಶೀದ್ ಹಾಜಿ ಮತ್ತಿತರರು ಬೋಳಾರದ ಜುಮಾ ಮಸ್ಜಿದ್‌ನ ಆಡಳಿತ ಕಮಿಟಿಯ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಅದರಂತೆ ಬೋಳಾರ ಮಸೀದಿಯ ಕಮಿಟಿ ಮುಖಂಡರ ಒಪ್ಪಿಗೆಯೊಂದಿಗೆ ಸಂಜೆ ಸುಮಾರು 5:15ರ ವೇಳೆಗೆ ವಿಧಿ ವಿಧಾನದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.

ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಮೃತರ ನಮಾಝ್‌ಗೆ ನೇತೃತ್ವ ನೀಡಿದ್ದರು.

ಬಂದರ್ ದಕ್ಕೆ ಸೀಲ್‌ಡೌನ್: ಬೆಂಗಳೂರು ಮೂಲದ 70 ವರ್ಷ ಪ್ರಾಯದ ಈ ವ್ಯಕ್ತಿಯು ರಾಜಧಾನಿಯಲ್ಲಿ ಅಂಗಡಿ ಹೊಂದಿದ್ದು, ಬೋಳಾರದ ಮಹಿಳೆಯನ್ನು ವಿವಾಹವಾಗಿದ್ದರು. ಈ ಮಹಿಳೆ ಮತ್ತು ಇವರ ಪುತ್ರಿಗೂ ಪಾಸಿಟಿವ್ ಬಂದಿದ್ದು, ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಜತೆಗೆ ಬಂದರ್ ದಕ್ಕೆಯೂ ಸೀಲ್‌ಡೌನ್‌ಗೆ ಒಳಗಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News