ಎಸೆಸೆಲ್ಸಿ ಪರೀಕ್ಷೆ: ಸಚಿವ ಸುರೇಶ್‍ ಕುಮಾರ್ ವಿರುದ್ಧ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಕೆ

Update: 2020-06-23 14:48 GMT

ಬೆಂಗಳೂರು, ಜೂ.23: ನಿಗದಿತ ವೇಳಾಪಟ್ಟಿಯಂತೆ ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಸಲು ನಿರ್ಧಾರ ಮಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣಾ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.

ಈ ಕುರಿತು ಜನಾಧಿಕಾರ ಸಂಘರ್ಷ ಪರಿಷತ್ ಅಧ್ಯಕ್ಷ ಆದರ್ಶ ಆರ್. ಅಯ್ಯರ್, ಬಿ.ಕೆ ಪ್ರಕಾಶ್ ಬಾಬು ಹಾಗೂ ವಿ.ಬಿ. ವಿಶ್ವನಾಥ್ ಅವರು ಸಚಿವ ಸುರೇಶ್ ಕುಮಾರ್ ವಿರುದ್ಧ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಎಸೆಸೆಲ್ಸಿ ಪರೀಕ್ಷೆ ನಡೆಸಲು ನಿರ್ಧರಿಸಿರುವ ಸಚಿವ ಸುರೇಶ್ ಕುಮಾರ್ ವಿರುದ್ಧ ದೂರು ಸಲ್ಲಿಸಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಜೂನ್ 17 ರಂದು ಇ-ಮೇಲ್ ಮೂಲಕ ಮತ್ತು 18ರಂದು ನೇರವಾಗಿ ತೆರಳಿ ನಗರ ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗದ ಡಿಸಿಪಿ ಹಾಗೂ ಹಲಸೂರು ಗೇಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದೆವು.

ಪೊಲೀಸರು ದೂರು ಸ್ವೀಕರಿಸಿದ್ದರೂ ಈವರೆಗೆ ಎಫ್‍ಐಆರ್ ದಾಖಲಿಸಿಲ್ಲ. ಸಚಿವ ಸುರೇಶ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 304 ಮತ್ತು 107ರಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಕೋರಿದ್ದರೂ ಪೊಲೀಸರು ಮುಂದಿನ ಕ್ರಮ ಜರುಗಿಸಿಲ್ಲ. ಹೀಗಾಗಿ ಕೋರ್ಟ್ ಸಿಆರ್‍ಪಿಸಿ ಸೆಕ್ಷನ್ 156(3)ರಡಿ ಅಧಿಕಾರ ಚಲಾಯಿಸಿ ಪೊಲೀಸರಿಗೆ ಎಫ್‍ಐಆರ್ ದಾಖಲಿಸಲು ಮತ್ತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಮಾತ್ರವೇ ಪರೀಕ್ಷೆಗಳನ್ನು ನಡೆಸುವ ಅಧಿಕಾರ ಮತ್ತು ಜವಾಬ್ದಾರಿಗಳಿವೆ. ಎಸೆಸೆಲ್ಸಿ ಪರೀಕ್ಷೆಗಳನ್ನು ನಡೆಸುವುದು ಸಚಿವ ಸುರೇಶ್ ಕುಮಾರ್ ಅವರ ಕಾರ್ಯವಲ್ಲ. ಆದರೂ ಸಚಿವರು ಉದ್ದೇಶಪೂರ್ವಕವಾಗಿ ಮತ್ತು ಒತ್ತಾಯಪೂರ್ವಕವಾಗಿ ಮೇ 18ರಂದು ಮಂಡಳಿ ಜೊತೆ ಸಭೆ ನಡೆಸಿ ಜೂನ್ 25ರಿಂದ ಜುಲೈ 4ರವರೆಗೆ ಪರೀಕ್ಷಾ ದಿನಾಂಕಗಳನ್ನು ನಿಗದಿ ಮಾಡಿದ್ದಾರೆ. ಈ ಮೂಲಕ 8.48 ಲಕ್ಷ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಅಪಾಯಕ್ಕೆ ತಳ್ಳುವ ಮೂಲಕ ಅಪರಾಧ ಎಸಗಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News