ಮಂಗಳೂರು: ಜನಪರ ಬೇಡಿಕೆಗೆ ಸ್ಪಂದಿಸಲು ಆಗ್ರಹಿಸಿ ಎಸ್‌ಡಿಪಿಐ ಧರಣಿ

Update: 2020-06-23 17:10 GMT

ಮಂಗಳೂರು : ವಿದ್ಯುತ್ ಬಿಲ್ ಮನ್ನಾ ಮಾಡುವುದು, ರೈತ ವಿರೋಧಿ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಕಾಯ್ದೆ ಹಿಂಪಡೆಯುವುದು, ಕೊವೀಡ್ 19 ರೋಗಿಗಳ ಶುಶ್ರೂಷೆಗೆ ಖಾಸಗಿ ಆಸ್ಪತ್ರೆಗಳ ಬಿಲ್ ವಿಷಯ, ತೈಲ ಬೆಲೆ ಏರಿಕೆ ಇಳಿಕೆ ಮಾಡುವಂತೆ ಆಗ್ರಹಿಸಿ ಎಸ್‌ಡಿಪಿಐನಿಂದ ಮಂಗಳೂರು ಮಹಾನಗರ ಪಾಲಿಕೆ ಎದುರು ಮಂಗಳವಾರ ಧರಣಿ ನಡೆಸಲಾಯಿತು.

ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಸುಹೈಲ್ ಖಾನ್, ಮಾರ್ಚ್‌ನಿಂದ ಮೇ ವರೆಗೆ ಸರಕಾರ ಘೋಷಿಸಿದ ಲಾಕ್‌ಡೌನ್‌ಗೆ ರಾಜ್ಯ ಸಹಕಾರ ನೀಡಿದೆ. ಈ ಅವಧಿಯಲ್ಲಿ ಜನತೆ ಮನೆಯಲ್ಲೇ ಇದ್ದು ಕೊರೋನ ವಿರುದ್ಧ ಹೋರಾಟ ನಡೆಸಿದ್ದರು. ದುಡಿಮೆ ಇಲ್ಲದೆ ಮನೆಯಲ್ಲೇ ಕುಳಿತು ತೀವ್ರ ಸಂಕಷ್ಟದಲ್ಲಿದ್ದ ಜನತೆಗೆ ವಿದ್ಯುತ್ ಬಿಲ್ ಹೊರೆ ಯಾಗಿದೆ. ದುಪ್ಪಟ್ಟು ಬಿಲ್ ಬರುತ್ತಿದ್ದು, ಅದನ್ನು ಕೂಡಲೇ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರಕಾರ ಜಾರಿಗೆ ತಂದಿರುವ ಭೂ ಸುಧಾರಣಾ (ಇದ್ದುಪಡಿ) ಕಾಯ್ದೆಯು ರೈತ ವಿರೋಧಿಯಾಗಿದೆ. ಬಂಡವಾಳಶಾಹಿಗಳು ಕೃಷಿಭೂಮಿ ಖರೀದಿಸುವುದರಿಂದ ಹಲವು ಅಪಾಯಗಳು ಕಾದಿವೆ. ಜತೆಗೆ ಕೊವೀಡ್ 19 ರೋಗಿಗಳ ಶೂಶ್ರೂಷೆಗೆ ಖಾಸಗಿ ಆಸ್ಪತ್ರೆಗಳ ಬಿಲ್ ಗೆ ಸಂಬಂಧಿಸಿ ಅತ್ಯಂತ ದುಬಾರಿ ಶುಲ್ಕವನ್ನು ಸರಕಾರ ನಿಗದಿಪಡಿಸಿರುವುದು ಆಘಾತಕಾರಿಯಾಗಿದೆ ಎಂದರು.

ಜಾಗತಿಕ ತೈಲಬೆಲೆ ನೆಲಕಚ್ಚಿದರೂ ಕೇಂದ್ರ ಸರಕಾರ ನಿರಂತರವಾಗಿ ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡುತ್ತಿರುವುದು ಜನ ವಿರೋಧಿ ನೀತಿಯಾಗಿದೆ. ಇಂತಹ ಬೆಲೆ ಏರಿಕೆಯು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಯಾಗಿದೆ. ಜನರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತಿರುವ ಕೇಂದ್ರ ಸರಕಾರದ ಕ್ರಮ ಖಂಡನೀಯ ಎಂದು ಹೇಳಿದರು.

ಧರಣಿಯಲ್ಲಿ ಎಸ್‌ಡಿಪಿಐ ಮುಖಂಡ ರಿಯಾಝ್ ಪರಂಗಿಪೇಟೆ, ಮನಪಾ ಸದಸ್ಯ ಮುನೀಬ್ ಬೆಂಗ್ರೆ, ಎಸ್‌ಡಿಟಿಯು ಮುಖಂಡ ನೌಫಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News