ಜೂ. 29ರಿಂದ ಉಳ್ಳಾಲದಲ್ಲಿ ಕೊರೋನ ರ್ಯಾಂಡಮ್ ತಪಾಸಣೆ: ಯು.ಟಿ.ಖಾದರ್

Update: 2020-06-27 17:50 GMT

ಮಂಗಳೂರು, ಜೂ.27: ಉಳ್ಳಾಲ ವ್ಯಾಪ್ತಿಯಲ್ಲಿ ಕೊರೋನ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿರುವುದರಿಂದ ಮುಂಜಾಗೃತಾ ಕ್ರಮವಾಗಿ ಕೊರೋನ ಸೋಂಕಿನ ರ್ಯಾಂಡಮ್ ತಪಾಸಣೆ ಸೋಮವಾರದಿಂದ ನಡೆಸಲಾಗುವುದು ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೊರೋನ ಸೋಂಕಿಗೆ ಉಳ್ಳಾಲದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈಗಾಗಲೇ ನಾಲ್ಕು ಮಂದಿ ಪೊಲೀಸರಿಗೂ ಕೊರೋನ ಸೋಂಕು ಕಾಣಿಸಿಕೊಂಡಿದ್ದು, ಇದೇ ವೇಳೆ ಇಂದು ಒಂದು ಮನೆಯ ಹಲವಾರು ಮಂದಿಯಲ್ಲಿ ಕೊರೋನ ಸೋಂಕು ದೃಢಗೊಂಡಿದೆ. ಹಾಗಾಗಿ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕವಾಗಿ ಹೆಚ್ಚಾಗಿ ಸಂಪರ್ಕದಲ್ಲಿರುವವರ ಕೊರೋನ ತಪಾಸಣೆ ಮಾಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಪೊಲೀಸರು ಹಾಗೂ ಅವರ ಕುಟುಂಬಸ್ಥ ತಪಾಸಣೆ ನಡೆಸಲಾಗಿದೆ ಎಂದರು.

ತಪಾಸಣೆ ವರದಿ ಇಲ್ಲದೆ ವ್ಯಾಪಾರಕ್ಕೆ ಅವಕಾಶವಿಲ್ಲ

ಸೋಮವಾರದಂದು ಈ ಬಗ್ಗೆ ಧಾರ್ಮಿಕ, ಸಾಮಾಜಿಕ ಪ್ರಮುಖರ ಸಭೆ ನಡೆಸಿ ಪಟ್ಟಿ ತಯಾರಿಸಿಕೊಂಡು ಮೀನು ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು, ರಿಕ್ಷಾ- ಟೆಂಪೋ ಚಾಲಕರಿಗೆ ಮೊದಲ ಹಂತದಲ್ಲಿ ಉಚಿತವಾಗಿ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ. ಎಲ್ಲರೂ ಸಹಕರಿಸ ಬೇಕು. ಮುಂದೆ ತಪಾಸಣೆಯ ಅಧಿಕೃತ ವರದಿ ಇಲ್ಲದೆ ವ್ಯಾಪಾರ ಮಾಡದಂತೆ ನಗರಸಭೆ ಕ್ರಮ ವಹಿಸಲಿದೆ ಎಂದು ವಾಜಿ ಸಚಿವ ಯು.ಟಿ. ಖಾದರ್ ತಿಳಿಸಿದರು.

ಉಳ್ಳಾಲದ ಕೋಡಿ, ಆಝಾದ್‌ ನಗರದಲ್ಲಿ ಕೊರೋನ ಸೋಂಕಿತರು ಕಂಡು ಬಂದಿರುವುದರಿಂದ ಮುಂಜಾಗೃತಾ ಕ್ರಮವಾಗಿ ಉಳ್ಳಾಲದಲ್ಲಿ ಈಗಾಗಲೇ ಸ್ಯಾನಿಟೈಸೇಶನ್ ಕಾರ್ಯ ನಡೆಸಲಾಗಿದೆ. ಇದಲ್ಲದೆ ಪ್ರತಿ ವಾರ್ಡ್‌ಗೆ ಧಾರ್ಮಿಕ ಸಾಮಾಜಿಕ ಮುಖಂಡರನ್ನು ಒಳಗೊಂಡ ಕಾರ್ಯಪಡೆ ರಚಿಸಲು ತೀರ್ಮಾನಿಸಲಾಗಿದೆ. ಮಾಸ್ತಿಕಟ್ಟೆ, ಆಝಾದ್‌ನಗರದ ಸೀಲ್‌ಡೌನ್ ಮಾಡಲಾಗಿದೆ. ಇಲ್ಲಿ ಅನಗತ್ಯವಾಗಿ ಯಾರೂ ಹೊರಗಡೆ ಹೋಗದಂತೆ ಎಚ್ಚರಿಕೆಯನ್ನು ಸ್ಥಳೀಯರೇ ವಹಿಸಲಿದ್ದಾರೆ. ಉದ್ಯೋಗಕ್ಕೆ ಹಾಗೂ ವ್ಯಾಪಾರಕ್ಕೆ ಹೋಗುವವರಿಗೆ ಅವಕಾಶ ಕಲ್ಪಿಸಲಾಗಿದ್ದರೂ, ಅವರು ಸ್ವಯಂ ಪ್ರೇರಿತವಾಗಿ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಈಗಾಗಲೇ ಸೋಂಕು ತಗಲಿದವರ ಸಂಪರ್ಕದಲ್ಲಿರುವವರು, ಅವರ ಜತೆ ವ್ಯವಹರಿಸಿದವರು ಸ್ವಯಂ ಪ್ರೇರಿತವಾಗಿ ಕೊರೋನ ತಪಾಸಣೆ ಮಾಡಲು ಮುಂದೆ ಬರಬೇಕು. ಕೊರೋನ ಬಗ್ಗೆ ಭಯ ಬೇಡ. ಆದರೆ ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಇತರರಿಗೆ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವುದು ಅತೀ ಅಗತ್ಯ ಎಂದು ಯು.ಟಿ.ಖಾದರ್ ಹೇಳಿದರು.

ಕೊರೋನ ಸೋಂಕು ಚಿಕಿತ್ಸೆಗೆ ಸಂಬಂಧಿಸಿ ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆಗೆ ಸರಕಾರ ಅನುಮತಿಸಿದ್ದು, ಚಿಕಿತ್ಸೆ ಕುರಿತಂತೆ ಸ್ಪಷ್ಟ ಮಾಹಿತಿಯನ್ನು ಜನತೆಗೆ ನೀಡಬೇಕು. ಇದೇ ವೇಳೆ ಜಿಲ್ಲಾಡಳಿತ ಎಲ್ಲಾ ಸಂಘ ಸಂಸ್ಥೆಗಳ ಸಭೆ ಕರೆದು, ಮುಂದಿನ ದಿನಗಳಲ್ಲಿ ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚಿಸಿ ರೂಪು ರೇಷೆಗಳನ್ನು ಸಿದ್ಧಪಡಿಸಬೇಕು. ಸೋಂಕಿತರು ಹಾಗೂ ಅವರ ಕುಟುಂಬಕ್ಕೆ ಧೈರ್ಯ ತುಂಬುವ ನಿಟ್ಟಿನಲ್ಲಿ ಕೌನ್ಸೆಲಿಂಗ್ ವ್ಯವಸ್ಥೆ ಮಾಡಬೇಕು ಎಂದು ಮಾಜಿ ಆರೋಗ್ಯ ಸಚಿವರೂ ಆಗಿರುವ ಖಾದರ್ ಸಲಹೆ ನೀಡಿದರು.

ಗೋಷ್ಠಿಯಲ್ಲಿ ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ದಿನೇಶ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News