ಬೆಂಗಳೂರು: ಐದು ಕೊರೋನ ಆರೈಕೆ ಕೇಂದ್ರ ಆರಂಭ

Update: 2020-06-28 18:06 GMT

ಬೆಂಗಳೂರು, ಜೂ.28: ನಗರದಲ್ಲಿ ಕೊರೋನ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂಬಂಧ ನಗರದ ಜಿಕೆವಿಕೆ, ಖಾಸಗಿ ಹೋಟೆಲ್‍ಗಳಲ್ಲಿ 1600 ಹಾಸಿಗೆಗಳುಳ್ಳ ಕೊರೋನ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ.

ಹೊರ ರಾಜ್ಯಗಳು ಹಾಗೂ ಬೇರೆ ಜಿಲ್ಲೆಗಳಿಂದ ಆಗಮಿಸಿರುವವರಿಂದ ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಸೋಂಕಿತರನ್ನು ದಾಖಲು ಮಾಡಲು ಸ್ಥಳಾವಕಾಶ ಒದಗಿಸುವ ಉದ್ದೇಶದಿಂದ ಸಾಂಕ್ರಾಮಿಕ ರೋಗಗಳ ಕಾಯ್ದೆ ಅನ್ವಯ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಹಾಗೂ ಆಸ್ಪತ್ರೆಯಲ್ಲಿ 200 ಹಾಸಿಗೆ, ಜಿಕೆವಿಕೆ ಕೃಷಿ ವಿದ್ಯಾರ್ಥಿ ನಿಲಯದಲ್ಲಿ 600 ಹಾಸಿಗೆಗಳು, ಜಿಕೆವಿಕೆ ತೋಟಗಾರಿಕೆ ವಿದ್ಯಾರ್ಥಿ ನಿಲಯದಲ್ಲಿ 400 ಹಾಸಿಗೆಗಳು, ಮೆಜೆಸ್ಟಿಕ್‍ನ ಹೋಟೆಲ್ ಸಿಟಿ ಸೆಂಟೊರ್ ಇಂಟರ್‍ನ್ಯಾಷನಲ್‍ನಲ್ಲಿ 200 ಹಾಸಿಗೆಗಳು ಹಾಗೂ ರೆಸಿಡೆನ್ಸಿ ರಸ್ತೆಯ ಚಾನ್ಸರಿ ಪೆವಿಲಿಯನ್‍ನಲ್ಲಿ 200 ಹಾಸಿಗೆಗಳು ಸೇರಿ ಒಟ್ಟು 1600 ಹಾಸಿಗೆಗಳನ್ನು ಮೀಸಲಿರಿಸಲಾಗುತ್ತಿದೆ.

ಬಿಬಿಎಂಪಿ ವತಿಯಿಂದ ಗುರುತಿಸಲಾಗಿರುವ ಈ ಕೇಂದ್ರಗಳಲ್ಲಿ ಕೊರೋನ ಸೋಂಕಿಗೆ ಒಳಗಾದವರಿಗೆ ಸೂಕ್ತ ಸೌಲಭ್ಯ ಒದಗಿಸಿಕೊಡುವ ಕುರಿತಂತೆ ಸಿಬ್ಬಂದಿ ನೇಮಕ, ವೈದ್ಯರ ನಿಯೋಜನೆ ಮಾಡುವಂತೆ ಸೂಚಿಸಲಾಗಿದೆ. ಈ ಕೇಂದ್ರಗಳಿಗೆ ಮಧ್ಯಮ ಸೋಂಕಿನ ಲಕ್ಷಣಗಳುಳ್ಳ ವ್ಯಕ್ತಿಗಳನ್ನು ಮಾತ್ರ ದಾಖಲು ಮಾಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News