​ಎಸೆಸೆಲ್ಸಿ ವಿಜ್ಞಾನ ಪರೀಕ್ಷೆ: ಉಡುಪಿಯಲ್ಲಿ 12,976 ವಿದ್ಯಾರ್ಥಿಗಳು ಹಾಜರು

Update: 2020-06-29 14:56 GMT

ಉಡುಪಿ, ಜೂ. 29: ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನ ಸೋಂಕು ದೃಢ ಪಟ್ಟಿರುವ ಭೀತಿಯ ಮಧ್ಯೆ ಉಡುಪಿ ಜಿಲ್ಲೆಯಾದ್ಯಂತ ಒಟ್ಟು 51 ಕೇಂದ್ರಗಳಲ್ಲಿ ಸೋಮವಾರ ನಡೆದ ಎಸೆಸೆಲ್ಸಿ ವಿಜ್ಞಾನ ಪರೀಕ್ಷೆಗೆ ಒಟ್ಟು 12,976 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 13,768 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಇದರಲ್ಲಿ ಹೊರ ಜಿಲ್ಲೆಯಲ್ಲಿ ಪರೀಕ್ಷೆ ಬರೆದ 588 ಮತ್ತು ಹಾಜರಾತಿ ಇಲ್ಲದೆ ಹಾಲ್ ಟಿಕೆಟ್‌ನಿಂದ ವಂಚಿತರಾದ 95 ಮಂದಿ ಸೇರಿದ್ದಾರೆ. ಇವರನ್ನು ಹೊರತು ಪಡಿಸಿ ಜಿಲ್ಲೆಯಲ್ಲಿ ಒಟ್ಟು 109 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುಹಾಜರಾಗಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಕಾರಿಂಜ ತಿಳಿಸಿದ್ದಾರೆ.

ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ 12793 ಆಗಿದ್ದು, ಪರೀಕ್ಷೆಗೆ ಹಾಜರಾಗಲು ದಾಖಲಾತಿ ಮಾಡಿಕೊಂಡ ಒಟ್ಟು 453 ಖಾಸಗಿ ವಿದ್ಯಾರ್ಥಿಗಳ ಪೈಕಿ 376 ಮಂದಿ ಪರೀಕ್ಷೆ ಬರೆದು, 77 ಮಂದಿ ಗೈರುಹಾಜರಾಗಿದ್ದಾರೆ. ಹೊರ ಜಿಲ್ಲೆಗಳಿಂದ ಬಂದು ನೋಂದಾಯಿಸಿಕೊಂಡ ಎಲ್ಲ 82 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಮತ್ತಿಬ್ಬರು ವಿದ್ಯಾರ್ಥಿಗಳಿಗೆ ಅನಾರೋಗ್ಯ

ಕೊರೋನ ಸಂಬಂಧ ಕಂಟೈನ್‌ಮೆಂಟ್ ವಲಯಗಳಿಂದ ಒಬ್ಬರ ಹೊಸ ಸೇರ್ಪಡೆಯೊಂದಿಗೆ ಒಟ್ಟು 10 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ದ್ದಾರೆ. ಇದರಲ್ಲಿ ಕಾರ್ಕಳ ವಲಯ- 3, ಕುಂದಾಪುರ- 1, ಬ್ರಹ್ಮಾವರ-2, ಬೈಂದೂರು -3 ಉಡುಪಿ -1 ವಿದ್ಯಾರ್ಥಿ ಸೇರಿದ್ದಾರೆ.
ಇಂದಿನ ಪರೀಕ್ಷೆಗೆ ಹಾಜರಾದ ಇಬ್ಬರು ವಿದ್ಯಾರ್ಥಿಗಳಲ್ಲಿ ಅನಾರೋಗ್ಯ ಕಂಡು ಬಂದಿದೆ. ಅದರಲ್ಲಿ ಒಬ್ಬರಿಗೆ ವಾಂತಿ, ಮತ್ತೊಬ್ಬರಿಗೆ ಕೆಮ್ಮು ಎಂದು ತಿಳಿದು ಬಂದಿದೆ. ಹೀಗೆ ಒಟ್ಟು ಬೈಂದೂರು, ಕುಂದಾಪುರ, ಕಾರ್ಕಳ, ಬ್ರಹ್ಮಾವರ ವಲಯಗಳಿಂದ ತಲಾ ಒಬ್ಬರು, ಉಡುಪಿ ವಲಯದಿಂದ ಇಬ್ಬರು ವಿದ್ಯಾರ್ಥಿಗಳು ಅನಾರೋಗ್ಯ ಪೀಡಿತರಾಗಿದ್ದಾರೆ.

ಇವರೆಲ್ಲರನ್ನು ಕೂಡ ಪ್ರತ್ಯೇಕ ಕೋಣೆಯಲ್ಲಿ ಕುಳ್ಳಿರಿಸಿ ಪರೀಕ್ಷೆ ಬರೆಸ ಲಾಯಿತು. ಉಳಿದಂತೆ ಎಲ್ಲೂ ಕೂಡ ಯಾವುದೇ ಗೊಂದಲಗಳು, ಅವ್ಯವ ಹಾರಗಳು ಕಂಡುಬಂದಿಲ್ಲ. ಜಿಲ್ಲೆಯ ಎಲ್ಲ ಕೇಂದ್ರಗಳಲ್ಲಿಯೂ ಕೊರೋನ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ ಎಂದು ಉಪ ನಿರ್ದೇಕ ಶೇಷಶಯನ ಕಾರಿಂಜ ತಿಳಿಸಿದರು.

ಹೆಜಮಾಡಿ ಕೇಂದ್ರದಲ್ಲಿ ಸುರಕ್ಷಿತ ಕ್ರಮ

ಕೊರೋನ ಸೋಂಕಿತ ವಿದ್ಯಾರ್ಥಿನಿ ಪರೀಕ್ಷೆ ಬರೆದ ಹೆಜಮಾಡಿ ಕೇಂದ್ರ ದಲ್ಲಿ ಇಂದು ಅತ್ಯಂತ ವ್ಯವಸ್ಥಿತವಾಗಿ ಮತ್ತು ಎಲ್ಲ ರೀತಿಯ ಸುರಕ್ಷಿತ ಕ್ರಮ ಗಳೊಂದಿಗೆ ಪರೀಕ್ಷೆ ನಡೆಸಲಾಯಿತು.

ಶಿಕ್ಷಕಿಗೆ ರಜೆ: ಆಕೆ ಪರೀಕ್ಷೆ ಬರೆದ ಕೋಣೆಯನ್ನು ಸ್ಯಾನಿಟೈಸ್ ಮಾಡಿ ಮುಚ್ಚಲಾಗಿದ್ದು, ಆಕೆಯೊಂದಿಗೆ ಪರೀಕ್ಷೆ ಬರೆದ ಇತರ 19 ವಿದ್ಯಾರ್ಥಿ ಗಳು ಬೇರೆ ಕೋಣೆಯಲ್ಲಿ ಪರೀಕ್ಷೆ ಬರೆದರು. ಈ ವಿದ್ಯಾರ್ಥಿಗಳನ್ನು ಮೂರು ಅಡಿ ಅಂತರದ ಬದಲು ಆರು ಅಡಿ ಅಂತರದಲ್ಲಿ ಅಂದರೆ ಒಂದು ಡೆಸ್ಕ್‌ನಲ್ಲಿ ಒಬ್ಬರನ್ನು ಮಾತ್ರ ಕುಳ್ಳಿರಿಸಲಾಗಿತ್ತು. ಈ ಕೊಠಡಿಯಲ್ಲಿ ಕಳೆದ ಪರೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News