ಹೆಚ್ಚುತ್ತಿರುವ ಕೊರೋನ: ಅಪಾರ್ಟ್ ಮೆಂಟ್, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ನೆರವು ಕೋರಿ ಮಾರ್ಗಸೂಚಿ

Update: 2020-07-12 13:00 GMT

ಬೆಂಗಳೂರು, ಜು.12: ಸಿಲಿಕಾನ್ ಸಿಟಿಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಅಪಾರ್ಟ್ ಮೆಂಟ್‍ಗಳ ಮಾಲಕರ ಸಂಘ ಹಾಗೂ ವಿವಿಧ ಕಂಪೆನಿಗಳಿಗೆ ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸಲು ಅವಕಾಶ ನೀಡಲಾಗಿದ್ದು, ಅವುಗಳ ಸೂಕ್ತ ನಿರ್ವಹಣೆಗೆ ಸಹಕಾರ ನೀಡುವಂತೆ ಕೋರಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ನಗರದಲ್ಲಿ ಪ್ರತಿದಿನವೂ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಎದುರಾಗತೊಡಗಿದೆ. ಆದುದರಿಂದಾಗಿ ರೋಗ ಲಕ್ಷಣರಹಿತ ಹಾಗೂ ಆರಂಭಿಕ ಹಂತದ ಲಕ್ಷಣಗಳನ್ನು ಹೊಂದಿರುವ ಸೋಂಕಿತರನ್ನು ಕೋವಿಡ್ 19 ಆರೈಕೆ ಕೇಂದ್ರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಯಾವುದೇ ಅನಾರೋಗ್ಯ ಸಮಸ್ಯೆಯಿಲ್ಲದ 50 ವರ್ಷದೊಳಗಿನ ಸೋಂಕಿತರಿಗೆ ಮನೆಯಲ್ಲಿಯೇ ಆರೈಕೆ ಮಾಡಲಾಗುತ್ತಿದೆ. ನಗರದಲ್ಲಿ ಜಿಕೆವಿಕೆ, ಹಜ್ ಭವನ, ಬಿಇಐಸಿ ಸೇರಿದಂತೆ ಹಲವು ಕಡೆಗಳಲ್ಲಿ ಸರಕಾರ ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸಿದೆ. ಇದೀಗ ಕ್ಷೇಮಾಭಿವೃದ್ಧಿ ಸಂಘ, ಅಪಾರ್ಟ್ ಮೆಂಟ್ ಮಾಲಕರ ಸಂಘ ಸೇರಿ ವಿವಿಧ ಸಂಘ-ಸಂಸ್ಥೆಗಳ ಸಹಾಯವನ್ನು ಪಡೆಯಲು ಸರಕಾರ ಮುಂದಾಗಿದೆ.

ಈ ಸಂಬಂಧ ತಮ್ಮ ಸುತ್ತಮುತ್ತಲಿನ ಮನೆ ಅಥವಾ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ವರದಿಯಾದಲ್ಲಿ ಆರೈಕೆ ಹಾಗೂ ಕೊರೋನ ನಿರ್ವಹಣೆಯಲ್ಲಿ ಸರಕಾರದೊಂದಿಗೆ ಕೈ ಜೋಡಿಸಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತರು ಮನವಿ ಮಾಡಿದ್ದಾರೆ.

ಮಾರ್ಗಸೂಚಿಯಲ್ಲಿ ಏನಿದೆ?: ಖಾಲಿಯಿರುವ ಮನೆಗಳು, ಸಮುದಾಯ ಸಭಾಂಗಣ, ಅಪಾರ್ಟ್ ಮೆಂಟ್‍ಗಳಲ್ಲಿ ಸೋಂಕಿತರ ಆರೈಕೆಗೆ ವ್ಯವಸ್ಥೆ ಮಾಡುವುದು. ಮಹಿಳೆ, ಮಕ್ಕಳು ಹಾಗೂ ಪುರುಷರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಹಾಗೂ ಪ್ರತ್ಯೇಕ ಸ್ನಾನ ಮತ್ತು ಶೌಚಗೃಹ ವ್ಯವಸ್ಥೆ ಮಾಡಿ ವಿದ್ಯುತ್ ಮತ್ತು ನೀರು ನಿರಂತರ ಲಭ್ಯವಿರುವಂತೆ ಕ್ರಮ ವಹಿಸಬೇಕು. ವಿಶಾಲವಾದ ಕೋಣೆಗಳಲ್ಲಿ ಪ್ರತಿ ಹಾಸಿಗೆಗೂ ಆರು ಅಡಿ ಅಂತರದಲ್ಲಿ 4-6 ಮಂದಿಯ ಆರೈಕೆಗೆ ವ್ಯವಸ್ಥೀಕರಿಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪೌಷ್ಠಿಕ ಆಹಾರದ ವ್ಯವಸ್ಥೆ ಮಾಡಬೇಕು.

ಕೇಂದ್ರಗಳಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಬೇಕು. ಸೋಂಕಿತರ ಆರೈಕೆಗೆ ವೈದ್ಯಕೀಯ ತಂಡಗಳ ಸಹಕಾರ ಪಡೆಯುವುದು. ರೋಗಿಗಳ ಆರೋಗ್ಯ ಸ್ಥಿತಿ ಕುರಿತು ನಿತ್ಯ ವೈದ್ಯರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಆಕ್ಸಿಮೀಟರ್, ಡಿಜಿಟಲ್ ಥರ್ಮಾಮೀಟರ್ ಹಾಗೂ ವೈಯುಕ್ತಿಕ ರಕ್ಷಣಾ ಸಾಧನಗಳ ವ್ಯವಸ್ಥೆ. ತುರ್ತುಸಂದರ್ಭದಲ್ಲಿ ಹಾಗೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ 108 ಸರಕಾರಿ ಆಂಬುಲೆನ್ಸ್ ಅಥವಾ ಖಾಸಗಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಬೇಕು. ಸರಕಾರದ ಮಾರ್ಗಸೂಚಿಯನ್ವಯ ವೈದ್ಯರ ಸಲಹೆ ಮೇರೆಗೆ ಚೇತರಿಸಿಕೊಂಡ ಸೋಂಕಿತರು ಕ್ವಾರಂಟೈನ್‍ನಿಂದ ಬಿಡುಗಡೆ ಹೊಂದಬಹುದಾಗಿದೆ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News