ಅಂತಿಮ ಪದವಿ ಪರೀಕ್ಷೆ ನಡೆಸದಿರಲು ಆಗ್ರಹಿಸಿ ಎಐಡಿಎಸ್‍ಓ ಆನ್‍ಲೈನ್ ಚಳವಳಿ

Update: 2020-07-17 12:48 GMT

ಬೆಂಗಳೂರು, ಜು. 17: ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಪದವಿ ಹಾಗು ಇಂಜಿನಿಯರಿಂಗ್‍ನ ಎಲ್ಲ ವಿದ್ಯಾರ್ಥಿಗಳಿಗೆ ಕೊರೋನ ಮಹಾಮಾರಿಯ ಸೋಂಕು ಏರಿಕೆಯಾಗುತ್ತಿರುವ ಈ ಸಮಯದಲ್ಲಿ ಪರೀಕ್ಷೆಯನ್ನು ನಡೆಸಬೇಡಿ ಎಂದು ಆಗ್ರಹಿಸಿ ಎಐಡಿಎಸ್‍ಓ ಆನ್‍ಲೈನ್ ಮೂಲಕ ವಿನೂತನ ರೀತಿಯಲ್ಲಿ ಚಳವಳಿ ನಡೆಸಿತು.

ಏಕರೂಪವಾದ, ತಾರತಮ್ಯವಿಲ್ಲದ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವ ಒಂದು ವೈಜ್ಞಾನಿಕ ಮೌಲ್ಯಮಾಪನ ಪ್ರಕ್ರಿಯೆಯನ್ನು ಸಿದ್ಧಪಡಿಸಿ, ಉದ್ಯೋಗ ಭದ್ರತೆಯನ್ನು ಖಾತ್ರಿಪಡಿಸಿ, ಎಲ್ಲ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡಬೇಕು. ಪರೀಕ್ಷಾ ಶುಲ್ಕವನ್ನು ರದ್ದುಗೊಳಿಸಿ. ಈಗಾಗಲೇ ಪಡೆದಿದ್ದಲ್ಲಿ ಹಿಂದಿರುಗಿಸಬೇಕು ಮತ್ತು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯನ್ನು ಮುಂದೂಡಬೇಕು ಎಂದು ಆಗ್ರಹಿಸಲಾಯಿತು..

ವಿದ್ಯಾರ್ಥಿಗಳ ಜೀವ ಪಣಕ್ಕಿಟ್ಟು ನಡೆಸುವ ಪರೀಕ್ಷೆ ನಮಗೆ ಬೇಡ. ಕೊರೋನ ಮಹಾಮಾರಿಯ ಸೋಂಕು ಏರುಗತಿಯಲ್ಲಿರುವಾಗ ಪರೀಕ್ಷೆ ನಡೆಸಬೇಡಿ. ಅಪ್ರಜಾತಾಂತ್ರಿಕವಾದ, ಏಕರೂಪವಲ್ಲದ, ತಾರತಮ್ಯವಾದ ಆನ್‍ಲೈನ್ ಶಿಕ್ಷಣ ಅಥವಾ ಆನ್‍ಲೈನ್ ಪರೀಕ್ಷೆ ನಮಗೆ ಬೇಡ ಎಂಬ ಫಲಕಗಳೊಂದಿಗೆ ವಿದ್ಯಾರ್ಥಿಗಳು ಯುಜಿಸಿ ಹಾಗು ರಾಜ್ಯ ಸರಕಾರದ ಶಿಕ್ಷಣ ವಿರೋಧಿ ನಿರ್ಧಾರದ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

4 ತಿಂಗಳ ಲಾಕ್‍ಡೌನ್‍ನಲ್ಲಿ ಸಾಮಾನ್ಯ ಜನರ ಸ್ಥಿತಿ ಅತ್ಯಂತ ಯಾತನಾಮಯವಾಗುತ್ತಿದೆ. ಇದರಿಂದ ಜನಜೀವನ ಚೇತರಿಕೆ ಆಗುವುದಿರಲಿ, ಕನಿಷ್ಠ ಸೌಲಭ್ಯಗಳೂ ಸಿಗದಿರುವ ಹಿನ್ನೆಲೆಯಲ್ಲಿಯೇ, ಕೇಂದ್ರ ಗೃಹ ಇಲಾಖೆ ಆದೇಶದ ಮೇರೆಗೆ ಯುಜಿಸಿ ಒಂದು ಶೈಕ್ಷಣಿಕ ಮಾರ್ಗಸೂಚಿ ಹೊರತಂದಿದೆ. ಅದೆಂದರೆ, ವಿವಿಗಳು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅನ್‍ಲೈನ್, ಆಫ್‍ಲೈನ್ ಅಥವಾ ಎರಡೂ ರೀತಿ ಬಳಸಿ ಪರೀಕ್ಷೆ ನಡೆಸಬೇಕು ಎಂಬುದು. ಇದರ ಬೆನ್ನಲ್ಲಿಯೇ ರಾಜ್ಯ ಸರಕಾರವು ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಹಾಗು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವಂತೆ ಆದೇಶಿಸಿದೆ.

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಇದೆ ತಿಂಗಳ ಕೊನೆಯಲ್ಲಿ ಸಿಇಟಿ ಪರೀಕ್ಷೆ ಮಾಡಲು ನಿರ್ಧರಿಸಿದೆ. ಈ ನಡೆ ಇಡೀ ರಾಜ್ಯದ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದು ಅತ್ಯಂತ ಅಪ್ರಜಾತಂತಿಕ ಹಾಗೂ ವಿದ್ಯಾರ್ಥಿ ವಿರೋಧಿಯಾಗಿದೆ. ಕೇವಲ ಶೇ.33ರಷ್ಟು ಅಂತರ್ಜಾಲ ಸೌಲಭ್ಯ ಸಿಗುವ ಕುಟುಂಬಗಳು ಇರುವ ಈ ದೇಶದಲ್ಲಿ ಆನ್‍ಲೈನ್ ಶಿಕ್ಷಣ ಅಥವಾ ಆನ್‍ಲೈನ್ ಪರೀಕ್ಷೆ ಎಂಬುದು ಮೂಲದಲ್ಲಿ ಶಿಕ್ಷಣ ವಿರೋಧಿ ಕ್ರಿಯೆಯಾಗಿದೆ ಮತ್ತು ಕೆಲವರಿಗೆ ಆನ್‍ಲೈನ್ ಹಾಗು ಕೆಲವರಿಗೆ ಆಫ್‍ಲೈನ್ ಈ ರೀತಿಯ ದ್ವಿಗುಣ ನೀತಿಯನ್ನು ಒಂದು ಪ್ರಜಾತಾಂತ್ರಿಕ ಸರಕಾರ ತಾಳುವುದು ತರವಲ್ಲ ಎಂದು ಎಐಡಿಎಸ್‍ಓ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News