ಅಂಚೆ ಕಚೇರಿಯ ಸಿಬ್ಬಂದಿಗೆ ಕೊರೋನ ಪಾಸಿಟಿವ್: ಮಂಗಳೂರಿನ 13 ಅಂಚೆ ಕಚೇರಿ ಬಂದ್

Update: 2020-07-18 15:26 GMT

ಮಂಗಳೂರು, ಜು.18: ಅಂಚೆ ಇಲಾಖೆಯ ಇಬ್ಬರು ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆ ಜು.20ರಂದು ಮಂಗಳೂರಿನ 13 ಅಂಚೆ ಕಚೇರಿಗಳು ಬಂದ್ ಆಗಲಿವೆ.

ಮಂಗಳೂರಿನ ಪಾಂಡೇಶ್ವರದಲ್ಲಿರುವ ಪ್ರಧಾನ ಅಂಚೆ ಕಚೇರಿ, ಹಂಪನಕಟ್ಟೆ, ಅಶೋಕನಗರ, ಗಾಂಧಿನಗರ, ಬೋಳೂರು, ಕೂಳೂರು, ಕೊಂಚಾಡಿ, ಕಾವೂರು, ಬಿಜೈ, ಕೊಡಿಯಾಲ್‌ಬೈಲ್, ಫಳ್ನೀರ್, ಫಿಶರಿಸ್ ಕಾಲೇಜ್, ಮಂಗಳೂರು ಕಲೆಕ್ಟರೇಟ್, ಎಸ್.ಒ. ಅಂಚೆ ಕಚೇರಿಗಳು ಸೋಮವಾರದಂದು ಸಾರ್ವಜನಿಕ ಸೇವೆಗೆ ದೊರೆಯುವುದಿಲ್ಲ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್. ತಿಳಿಸಿದ್ದಾರೆ.

ಮಂಗಳೂರಿನ ಪ್ರಧಾನ ಅಂಚೆ ಕಚೇರಿಯ ಇಬ್ಬರು ಸಿಬ್ಬಂದಿಗೆ ಶನಿವಾರ ಕೊರೋನ ಪಾಸಿಟಿವ್ ದೃಢಪಟ್ಟಿದೆ. ಇವರು ಅಂಚೆ ಇಲಾಖೆಯ ‘ಕ್ಯಾಶ್ ಓವರ್’ ಕರ್ತವ್ಯ ನಿರ್ವಹಿಸುತ್ತಿದ್ದು, ಮಂಗಳೂರಿನ ವಿವಿಧ ಅಂಚೆ ಇಲಾಖೆಗೆ ತೆರಳಿ ನಗದು ವಹಿವಾಟು ನೋಡಿಕೊಳ್ಳುತ್ತಿದ್ದರು. ಇದರಿಂದ ಇವರು ಕರ್ತವ್ಯಕ್ಕೆ ತೆರಳಿದ 13 ಅಂಚೆ ಕಚೇರಿಗಳಿಗೆ ಆತಂಕ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಂಚೆ ಇಲಾಖೆಯಿಂದ ಎಲ್ಲ ಅಂಚೆ ಕಚೇರಿಗಳಿಗೂ ಸ್ಯಾನಿಟೈಸೇಶನ್ ಮಾಡಲಾಗಿದ್ದು, ಸೋಮವಾರದವರೆಗೆ 13 ಅಂಚೆ ಕಚೇರಿ ಮುಚ್ಚಲಿವೆ. ಸಾರ್ವಜನಿಕ ಸೇವೆ ಲಭ್ಯವಿರುವುದಿಲ್ಲ ಎಂದು ಅಂಚೆ ಅಧೀಕ್ಷಕ ಶ್ರೀಹರ್ಷ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News