ಬೆಂಗಳೂರಿನಲ್ಲಿ ಆಸ್ಪತ್ರೆಗಳ ನಿರ್ಲಕ್ಷ್ಯ: ಚಿಕಿತ್ಸೆ ದೊರೆಯದೆ ಮಹಿಳೆ ಮೃತ್ಯು, ಆಟೊದಲ್ಲಿಯೇ ಬಾಕಿಯಾದ ರೋಗಿ

Update: 2020-07-18 16:07 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.18: ಕೊರೋನ ಸೋಂಕಿನ ಪ್ರಕರಣಗಳು ಏರಿಕೆ ಆಗುತ್ತಿರುವ ಕಾರಣವೊಡ್ಡಿ ರಾಜಧಾನಿ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹೊರ ರೋಗಿಗಳನ್ನು ನಿರ್ಲಕ್ಷಿಸುವ ಘಟನೆಗಳು ಮುಂದುವರಿದಿದ್ದು, ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಮಹಿಳೆಯೊಬ್ಬರು ಮೃತಪಟ್ಟಿರುವ ಹಾಗೂ ಆಟೊದಲ್ಲಿಯೇ ರೋಗಿಯೊಬ್ಬರು ಅಳಲು ತೋಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.

ಇಲ್ಲಿನ ವಿವಿಪುರಂನಲ್ಲಿ ನೆಲೆಸಿರುವ ಕುಟಂಬದ ಮೂವರು ಸದಸ್ಯರಿಗೆ ಕೊರೋನ ಸೋಂಕು ದೃಢಪಟ್ಟಿತ್ತು. ನಂತರ, ಜು.14ರಿಂದ ಸತತವಾಗಿ ಬಿಬಿಎಂಪಿ ಕೋವಿಡ್ ಸಹಾಯವಾಣಿ ಸಂಪರ್ಕಿಸಿದರೂ, ಯಾವುದೇ ರೀತಿಯ ಸಹಾಯಕ್ಕೆ ಮುಂದಾಗಿಲ್ಲ ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲ, ಒಂದೆರೆಡು ದಿನ ತಡೆಯಿರಿ ಎಂದೆಲ್ಲಾ ಸಬೂಬು ಹೇಳಿ ನಾಲ್ಕು ದಿನ ಮುಂದೂಡಿದ್ದರು. ಶುಕ್ರವಾರ ತಡರಾತ್ರಿ ತೀವ್ರ ಉಸಿರಾಟದ ತೊಂದರೆಯಾಗಿ ಮಹಿಳೆ ವಿವಿಪುರಂನ ಮನೆಯಲ್ಲಿಯೇ ಪ್ರಾಣಬಿಟ್ಟಿದ್ದಾರೆ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದರು. ಕೋವಿಡ್-19 ಹಿನ್ನೆಲೆ ಬಿಬಿಎಂಪಿ ಸಿಬ್ಬಂದಿಯೇ ಮೃತದೇಹದ ಅಂತ್ಯಕ್ರಿಯೆ ನಡೆಸಿದ್ದು, ಇವರ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಲಾಗಿದೆ.

ಆಟೊದಲ್ಲಿಯೇ ರೋಗಿ: ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ದೊರೆಯದೆ, ಆಟೊದಲ್ಲಿಯೇ ನಗರದ ವಿವಿಧೆಡೆ ಪರದಾಡಿದ ಘಟನೆ ನಡೆದಿದೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಪತಿಯನ್ನು, ಪತ್ನಿಯೇ ಆಟೊದಲ್ಲಿ ಕೂರಿಸಿಕೊಂಡು  ಬೆಂಗಳೂರಿನ ಏಳೆಂಟು ಕಡೆ ಸುತ್ತಿದ್ದಾರೆ. ಆದರೆ, ಯಾವೊಂದು ಆಸ್ಪತ್ರೆಯಲ್ಲೂ ದಾಖಲು ಮಾಡಿಕೊಳ್ಳದೆ, ನಿರ್ಲಕ್ಷ್ಯ ವಹಿಸಿ, ವಾಪಸ್ಸು ಹೋಗುವಂತೆ ಕಳುಹಿಸಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.

ನಗರದ ಸರಕಾರಿ ಆಸ್ಪತ್ರೆಯಾದ ವಿಕ್ಟೋರಿಯಾಗೆ ತೆರಳಿದರೆ, ಕೊರೋನ ಸೋಂಕಿನ ರೋಗಿಗಳಿಗೆ ಮಾತ್ರ ಪ್ರವೇಶ ಎಂದು ಉತ್ತರಿಸಿದ್ದಾರೆ. ಇದಾದ ಬಳಿಕ ನಗರದ ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳಿಗೆ ತೆರಳಿದರೂ ರೋಗಿಯನ್ನು ದಾಖಲಿಸಿಕೊಂಡಿಲ್ಲ. ಬಳಿಕ ಸೌತ್ ಎಂಡ್ ಸರ್ಕಲ್‍ನ ಖಾಸಗಿ ಅಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಪಡೆದು ಚಿಕಿತ್ಸೆಗಾಗಿ ಆಟೊದಲ್ಲಿಯೇ ಸುತ್ತುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆ ಅಳಲು ತೋಡಿಕೊಂಡಿರುವ ವಿಡಿಯೊ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News