ಕೋವಿಡ್-19: ಉಡುಪಿಯಲ್ಲಿ 20, ಬೈಂದೂರಿನಲ್ಲಿ 28 ಮನೆ ಸೀಲ್‌ಡೌನ್

Update: 2020-07-20 15:03 GMT

ಉಡುಪಿ, ಜು.20: ಜಿಲ್ಲೆಯಲ್ಲಿ ಕೊರೋನ ವೈರಸ್ ಪಾಸಿಟಿವ್ ಬರುತ್ತಿರು ವವರ ಸಂಖ್ಯೆ ಏರುಗತಿಯಲ್ಲೇ ಇದ್ದು, ಸೋಮವಾರ 70ಕ್ಕೂ ಅಧಿಕ ಪಾಸಿಟಿವ್ ಬಂದವರನ್ನು ಗುರುತಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಅವರ ಮನೆ ಹಾಗೂ ಅಕ್ಕಪಕ್ಕದ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಬೈಂದೂರಿನಲ್ಲಿ ಇಂದು ಒಟ್ಟು 28 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇವುಗಳಲ್ಲಿ ನಾವುಂದ-1, ಬಡಾಕೆರೆ-1, ಯಡ್ತರೆ-4, ನಾಡ-6, ಉಪ್ಪುಂದ-9, ಬಿಜೂರು-3, ಗೋಳಿಗೊಳೆ-1, ಕಾಲ್ತೋಡು-1 ಹಾಗೂ ಶಿರೂರಿನ 2 ಸೇರಿದ್ದಾರೆ. ಪಾಸಿಟಿವ್ ಬಂದವರ ಮನೆಗಳನ್ನು ಮಾತ್ರವಲ್ಲದೆ, ಅಕ್ಕಪಕ್ಕದ 4-5 ಮನೆಗಳನ್ನು ಸಹ ಸೀಲ್‌ಡೌನ್ ಮಾಡಿ ಕಂಟೈನ್‌ಮೆಂಟ್ ರೆನ್ ಮಾಡಲಾಗಿದೆ ಎಂದು ಬೈಂದೂರು ತಹಶೀಲ್ದಾರ್ ಬಸಪ್ಪ ತಿಳಿಸಿದ್ದಾರೆ.

ಉಡುಪಿ-20: ಉಡುಪಿ ತಾಲೂಕಿನಲ್ಲಿ ಇಂದು ಒಟ್ಟು 20 ಕಂಟೈನ್‌ಮೆಂಟ್ ವಲಯವನ್ನು ಮಾಡಲಾಗಿದೆ. ಇವುಗಳಲ್ಲಿ 80 ಬಡಗುಬೆಟ್ಟು-2, ಕೊಡವೂರು-4, ಮೂಡನಿಡಂಬೂರು-1, ಪುತ್ತೂರು-1, 76 ಬಡಗುಬೆಟ್ಟು- 3, ಅಂಬಲಪಾಡಿ-1, ಹೆರ್ಗ-3, ಶಿವಳ್ಳಿ-3 ಹಾಗೂ ಉದ್ಯಾವರ-1 ಸೇರಿವೆ ಎಂದು ಉಡುಪಿ ತಾಲೂಕು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಕುಂದಾಪುರ-10: ಕುಂದಾಪುರ ತಾಲೂಕಿನಲ್ಲಿ ಒಟ್ಟು 10 ಕಂಟೈನ್‌ಮೆಂಟ್ ವಲಯಗಳನ್ನು ರಚಿಸಲಾಗಿದೆ. ಇವುಗಳಲ್ಲಿ ಕುಂದಾಪುರ-2, ಕಾವ್ರಾಡಿ-1, ಬಸ್ರೂರು-1, ಕುಂಭಾಶಿ-2, ತ್ರಾಸಿ-1, ಕನ್ಯಾನ-1, ಹಕ್ಲಾಡಿ-2 ಸೇರಿವೆ. ಇಂದು ಪಾಸಿಟಿವ್ ಬಂದ ಹೆಚ್ಚಿನವರು ಮುಂಬಯಿ ಹಾಗೂ ಬೆಂಗಳೂರಿನಿಂದ ಬಂದು ಪಾಸಿಟಿವ್ ಕಂಡುಬಂದವರ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ.

ಬ್ರಹ್ಮಾವರ-5: ಬ್ರಹ್ಮಾವರ ತಾಲೂಕಿನ ಬ್ರಹ್ಮಾವರ ಹೋಬಳಿಯಲ್ಲಿ ಇಂದು ಐದು ಮಂದಿ ಪಾಸಿಟಿವ್ ಬಂದಿದ್ದಾರೆ. ಪೆಜಮಂಗೂರಿನಲ್ಲಿ 38 ವರ್ಷದ ಒಬ್ಬರು ಪಾಸಿಟಿವ್ ಬಂದಿದ್ದು, ಇಲ್ಲಿ ಒಟ್ಟು 4 ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಚಾಂತಾರು ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ 35 ವರ್ಷದ ಯುವಕನಲ್ಲಿ ಪಾಸಿಟಿವ್ ಕಂಡುಬಂದಿದ್ದು, ಅದೇ ಕಟ್ಟಡದ ಐದನೇ ಮಹಡಿಯ 9 ತಿಂಗಳ ಮಗುವೊಂದು ಮೂರು ದಿನಗಳ ಹಿಂದೆ ಪಾಸಿಟಿವ್ ಬಂದಿತ್ತು. ಇದೀಗ ಈ ಬಹುಮಹಡಿ ಕಟ್ಟಡ ಎರಡು ಮಹಡಿಗಳ ಒಟ್ಟು 24 ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಹಶೀಲ್ದಾರ್ ಕಿರಣ್ ಗೋರಯ್ಯ ತಿಳಿಸಿದ್ದಾರೆ.

ಇನ್ನು ನೀಲಾವರ ಗ್ರಾಮದಲ್ಲಿ 25 ವರ್ಷ ಪ್ರಾಯದ ಯುವಕನಲ್ಲಿ ಪಾಸಿಟಿವ್ ಕಂಡುಬಂದಿದ್ದು, ಆತನ ಮನೆಯೂ ಸೇರಿದಂತೆ ಒಟ್ಟು ನಾಲ್ಕು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಬಾರಕೂರಿನಲ್ಲಿ ಒಂದೇ ಮನೆಯ ಐವರಲ್ಲಿ ಪಾಸಿಟಿವ್ ಕಂಡುಬಂದಿದ್ದು, ಅಲ್ಲಿ 13 ಮನೆ ಹಾಗೂ 19 ಅಂಗಡಿಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದರು.

ಕೋಟ-12:  ಬ್ರಹ್ಮಾವರ ತಾಲೂಕು ಕೋಟ ಹೋಬಳಿಯಲ್ಲಿ ಇಂದು 12 ಮಂದಿ ಪಾಸಿಟಿವ್ ಆಗಿದ್ದಾರೆ. ಇವರಲ್ಲಿ ಯಡ್ತಾಡಿಯ ಒಬ್ಬರು, ಮೂಡಹಡುವಿನ ಒಬ್ಬರು, ಸಾಲಿಗ್ರಾಮದ ಇಬ್ಬರು, ಕೋಟದ ಇಬ್ಬರು, ಹೆಗ್ಗುಂಜೆಯ ಒಬ್ಬರು ಹಾಗೂ ಬಾರಕೂರಿನ ಐವರು ಸೇರಿದ್ದಾರೆ ಎಂದು ಕಂದಾಯ ಅಧಿಕಾರಿ ರಾಜು ತಿಳಿಸಿದ್ದಾರೆ.

ಸಾಲಿಗ್ರಾಮದಲ್ಲಿ ಈಗಾಗಲೇ ಪಾಸಿಟಿವ್ ಬಂದಿರುವ ಪುರುಷರೊಬ್ಬರ 50 ವರ್ಷದ ಪತ್ನಿಯಲ್ಲಿ ಇಂದು ಸೋಂಕುಪತ್ತೆಯಾದರೆ, ಯಡ್ತಾಡಿಯಲ್ಲಿ ಬೆಂಗಳೂರಿನಿಂದ ಬಂದ 68ರ ವೃದ್ಧರಲ್ಲಿ ಸೋಂಕು ಕಂಡುಬಂದಿದೆ. ಕೋಟ ಗಿಳಿಯಾರಿನಲ್ಲಿ 21 ವರ್ಷ ಪ್ರಾಯದ ಯುವತಿ ಹಾಗೂ ಈಗಾಗಲೇ ಸೋಂಕು ಇರುವ ಪುರುಷರ ಐದು ವರ್ಷ ಪ್ರಾಯದ ಮಗುವಿನಲ್ಲಿ ಪಾಸಿಟಿವ್ ಕಂಡು ಬಂದಿದೆ ಎಂದು ರಾಜು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News