ಉಡುಪಿ ನಗರದಾದ್ಯಂತ ಜಿಲ್ಲಾಧಿಕಾರಿಯಿಂದ ದಿಢೀರ್ ಪರಿಶೀಲನೆ

Update: 2020-07-21 15:28 GMT

ಉಡುಪಿ, ಜು.21: ಜಿಲ್ಲೆಯಾದ್ಯಂತ ಕೊರೋನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಪರಿಶೀಲನೆಗಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಜು.21ರಂದು ಸಂಜೆ ಉಡುಪಿ ನಗರದ ವಿವಿಧೆಡೆ ದಿಢೀರ್ ದಾಳಿ ನಡೆಸಿದ್ದಾರೆ.

ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿರುವ ಅಂಗಡಿಗಳಿಗೆ, ಟ್ಯಾಕ್ಸಿ ನಿಲ್ದಾಣ, ತ್ರಿವೇಣಿ ಸರ್ಕಲ್, ಸಂಸ್ಕೃತ ಕಾಲೇಜು ರಸ್ತೆ, ಮಸೀದಿ ರಸ್ತೆಗಳಲ್ಲಿ ಅಂಗಡಿ, ಹೊಟೇಲು, ಬಟ್ಟೆ ಅಂಗಡಿ, ಸೂಪರ್ ಮಾರ್ಕೆಟ್‌ಗಳಿಗೆ ತೆರಳಿದ ಜಿಲ್ಲಾಧಿಕಾರಿಗಳು, ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

ಮಾಸ್ಕ್, ಗ್ಲೌಸ್ ಧರಿಸದ ಹಾಗೂ ಸುರಕ್ಷಿತ ಅಂತರ ಕಾಪಾಡದೆ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿದ ಅಂಗಡಿಯ ಮಾಲಕರಿಗೆ ಹಾಗೂ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲು ಡಿಸಿ, ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಅದರಂತೆ ಈ ಸಂದರ್ಭದಲ್ಲಿ ಒಟ್ಟು 14 ಅಂಗಡಿ ಮತ್ತು ವ್ಯಕ್ತಿಗಳಿಂದ 2100ರೂ. ದಂಡ ವಸೂಲಿ ಮಾಡಲಾಯಿತು.

ಡಿಸಿಯಿಂದ ನೀತಿ ಪಾಠ: ಟ್ಯಾಕ್ಸಿ ನಿಲ್ದಾಣದ ಕಾರೊಂದರ ಒಳಗೆ ಕುಳಿತು ಸರಿಯಾಗಿ ಮಾಸ್ಕ್ ಧರಿಸದೆ, ಹರಟೆ ಹೊಡೆಯುತ್ತಿದ್ದ ಮೂವರು ಚಾಲಕರಿಗೆ ಜಿಲ್ಲಾಧಿಕಾರಿಗಳು ನೀತಿ ಪಾಠ ಮಾಡಿದರು. ಹೊಟೇಲಿನಲ್ಲಿ ಕೈತೊಳೆಯಲು ಸಾಬೂನು ಇರಿಸಿದ ಮಾಲಕನಿಗೆ ದಂಡ ವಿಧಿಸಲಾಯಿತು. ಅದೇ ರೀತಿ ಪೆಟ್ರೋಲ್ ಬಂಕ್‌ನಲ್ಲಿ ಕೈಗೆ ಗ್ಲೌಸ್ ಧರಿಸದೆ ಹಣ ಪಡೆಯುತ್ತಿದ್ದ ನೌಕರನಿಗೆ ಹಾಗೂ ಮಾಸ್ಕ್ ಧರಿಸದ ಬೈಕ್ ಸವಾರನಿಗೆ ದಂಡ ವಿಧಿಸಲು ಡಿಸಿ ಸೂಚಿಸಿದರು. ಅಲ್ಲೇ ಸಮೀಪದ ಮೆಡಿಕಲ್ ಶಾಪ್‌ಗೆ ಗ್ರಾಹಕರ ಸೋಗಿನಲ್ಲಿ ತೆರಳಿದ ಡಿಸಿ, ಪ್ಯಾರಸಿಟಮಲ್ ಮಾತ್ರೆ ಕೇಳಿದರು. ಮೆಡಿಕಲ್ ಮಾಲಕ ವೈದ್ಯರ ಚೀಟಿ ಇಲ್ಲದೆ ನೀಡುವುದಿಲ್ಲ ಎಂಬ ಉತ್ತರ ನೀಡಿದರು.

ನಗರದ ಸಿಟಿ ಸೆಂಟರ್‌ನಲ್ಲಿರುವ ಸೂಪರ್ ಮಾರ್ಕೆಟ್, ಬಟ್ಟೆ ಅಂಗಡಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಕೋವಿಡ್-19 ಮಾರ್ಗಸೂಚಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌ರಾಜ್, ಅಧಿಕಾರಿಗಳಾದ ಧನಂಜಯ್ ನಾಯಕ್, ಪ್ರಸನ್ನ, ನಾರಾಯಣ, ಪಾಂಡುರಂಗ, ದುರ್ಗಪ್ರಸಾದ್ ಮೊದಲಾದವರು ಹಾಜರಿದ್ದರು.

‘ಹಲವು ಕಡೆಗಳಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸದೆ ಓಡಾಡುತ್ತಿರುವುದು ಕಂಡುಬರುತ್ತಿದೆ. ಸಾರ್ವಜನಿಕರಿಗೆ ಮಾಸ್ಕ್ ಮತ್ತು ಸುರಕ್ಷಿತ ಅಂತರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ರೀತಿ ಪರಿಶೀಲನೆ ನಡೆಸಲಾಗುತ್ತಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ನಿರಂತರ ದಂಡ ವಿಧಿಸುವಂತೆ ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕಾಯಿಲೆಯನ್ನು ಹ್ಮಿಮೆಟಿಸಲು ಇರುವ ಎರಡೇ ಮಾರ್ಗ ಅಂದರೆ ಮಾಸ್ಕ್ ಹಾಗೂ ಸುರಕ್ಷಿತ ಅಂತರ ಕಾಪಾಡುವುದು. ಸ್ಥಳೀಯವಾಗಿ ಪ್ರಕರಣಗಳು ಹೆಚ್ಚು ಹೆಚ್ಚು ಕಂಡು ಬರುತ್ತಿರುವುದರಿಂದ ಜನ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು’
-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ.

ಜಿಲ್ಲೆಯಲ್ಲಿ 38200ರೂ. ದಂಡ ವಸೂಲಿ
ಉಡುಪಿ ಜಿಲ್ಲೆಯಾದ್ಯಂತ ಇಂದು ಸಂಜೆ 5 ಗಂಟೆಯಿಂದ 6 ಗಂಟೆಯ ವರೆಗೆ ಮಾಸ್ಕ್ ಧರಿಸದವರ ವಿರುದ್ಧ ದಂಡ ವಿಧಿಸುವ ಕಾರ್ಯಾಚರಣೆ ನಡೆದಿದ್ದು ಅದರಂತೆ ಜಿಲ್ಲೆಯಾದ್ಯಂತ ಒಟ್ಟು 382 ಪ್ರಕರಣಗಳಲ್ಲಿ 38200 ರೂ. ದಂಡ ವಸೂಲಿ ಮಾಡಲಾಗಿದೆ.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 1600ರೂ., ಕುಂದಾಪುರ ಪುರಸಭೆ- 2200ರೂ., ಕಾಪು ಪುರಸಭೆ- 800ರೂ., ಕಾರ್ಕಳ ಪುರಸಭೆ- 3200ರೂ., ಸಾಲಿಗ್ರಾಮ ಪ.ಪಂ.-1500ರೂ., ಉಡುಪಿ ತಾಲೂಕು- 4800ರೂ., ಬ್ರಹ್ಮಾವರ- 5900ರೂ., ಕಾಪು-2000ರೂ., ಕುಂದಾಪುರ-9000ರೂ., ಬೈಂದೂರು-3600ರೂ., ಕಾರ್ಕಳ-2700ರೂ., ಹೆಬ್ರಿ- 900ರೂ. ದಂಡ ವಸೂಲಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News