ಬೆಂಗಳೂರಿನಲ್ಲಿ ಕೊರೋನ ಸೋಂಕಿತರ ಸಂಖ್ಯೆ 34,943ಕ್ಕೆ ಏರಿಕೆ: ಒಟ್ಟು 720 ಜನರು ಸಾವು

Update: 2020-07-21 16:36 GMT

ಬೆಂಗಳೂರು, ಜು.21: ನಗರದಲ್ಲಿ ಮಂಗಳವಾರ ಒಂದೇ ದಿನ 1,714 ಜನರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಸೋಂಕಿಗೆ 22 ಮಂದಿ ಮೃತರಾಗಿದ್ದಾರೆ.

ನಗರದಲ್ಲಿ ಒಟ್ಟು 34,943 ಕೊರೋನ ಸೋಂಕಿತರು ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 720 ಜನರು ಸೋಂಕಿಗೆ ಬಲಿಯಾಗಿದ್ದಾರೆ. 7,474 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 26,746 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 32,645 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ಸೋಮವಾರ ವರದಿಯಲ್ಲಿ 9797 ಕಂಟೈನ್ಮೆಂಟ್ ಝೋನ್‍ಗಳಿದ್ದು, ಇದರಲ್ಲಿ 8394 ಕಂಟೈನ್ಮೆಂಟ್ ಝೋನ್‍ಗಳು ಸಕ್ರೀಯವಾಗಿವೆ.

ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೂ 4 ಚಿತಾಗಾರ ಕಾರ್ಯ: ನಗರದಲ್ಲಿ 12 ವಿದ್ಯುತ್ ಚಿತಾಗಾರಗಳಿದ್ದು, ಪ್ರತಿಯೊಂದರಲ್ಲಿ ಎರಡು ಬರ್ನರ್ ಗಳಿವೆ. ಪ್ರತಿನಿತ್ಯ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿನಿತ್ಯ 16 ದೇಹ ಅಂತ್ಯಕ್ರಿಯೆ ಮಾಡುವ ಸಾಮರ್ಥ್ಯ ಹೊಂದಿವೆ. ಅದರಲ್ಲಿ ಯಲಹಂಕದ ಮೇಡಿ ಅಗ್ರಹಾರ, ಬೊಮ್ಮನಹಳ್ಳಿಯ ಕೂಡ್ಲು, ಮಹದೇವಪುರದ ಪಣತ್ತೂರು ಹಾಗೂ ಆರ್.ಆರ್.ನಗರ ವಲಯದ ಕೆಂಗೇರಿಯ ಚಿತಾಗಾರಗಳಲ್ಲಿ ಕೋವಿಡ್ ಮೃತದೇಹಗಳನ್ನು ಸುಡಲು ನಿಯೋಜಿಸಲಾಗಿದೆ.

ಐದು ಎಕರೆ ಸ್ಮಶಾನಕ್ಕೆ ಭೂಮಿ ಕೊಡಲು ಮನವಿ: ಸೋಂಕಿನಿಂದ ಮೃತಪಟ್ಟವರನ್ನು ಹೂಳಲು 10 ಅಡಿ ಆಳಕ್ಕೆ ಗುಂಡಿ ತೊಡಬೇಕು. ಇದಕ್ಕೆ ಕಾರ್ಮಿಕರಿಂದ ಸಾಧ್ಯವಾಗದೆ ಜೆಸಿಬಿ ಬಳಸಬೇಕು. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿ 150 ಸ್ಮಶಾನಗಳಿದ್ದರೂ, ಅದರೊಳಗೆ ಜೆಸಿಬಿ ಹೋಗುವಷ್ಟು ರಸ್ತೆ ವಿಶಾಲವಾಗಿಲ್ಲ. ಜಿಲ್ಲಾಡಳಿತ ವತಿಯಿಂದ 35 ಎಕರೆ ಗುರುತಿಸಿದ್ದರೂ, ಹಲವು ಕಾರಣಗಳಿಂದ ಅಲ್ಲಿ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕಂದಾಯ ಇಲಾಖೆ ವತಿಯಿಂದ ಯಾವುದೇ ತಕರಾರು ಇಲ್ಲದ 5 ಎಕರೆ ಭೂಮಿ ನೀಡಲು ಪತ್ರ ಬರೆಯಲಾಗಿದೆ.

ಆಂಬುಲೆನ್ಸ್ ಚಾಲನೆಗೆ ಬಿಎಂಟಿಸಿ ನೌಕರರು ಸಿದ್ಧ

ಆಂಬುಲೆನ್ಸ್ ಚಾಲನೆಗೆ ಬಿಎಂಟಿಸಿ ಚಾಲಕರನ್ನು ಬಳಸಿಕೊಳ್ಳುವ ಚಿಂತನೆ ನಡೆಸಿದ್ದೇವೆ ಎಂದು ಪಾಲಿಕೆ ಹೇಳಿರುವ ಹಿನ್ನೆಲೆ ಬಿಬಿಎಂಪಿ ಬಿಎಂಟಿಸಿಯೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ, ಪ್ರಸ್ತಾವನೆಯಾಗಲಿ ಬಂದಿಲ್ಲ. ಆದರೆ ನಾವು ಆಂಬುಲೆನ್ಸ್ ಚಾಲನೆ ಮಾಡಲು ನಮ್ಮ ಸಿಬ್ಬಂದಿ ಸಿದ್ಧರಿದ್ದಾರೆ. ಬಿಬಿಎಂಪಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಪಿಪಿಇ ಕಿಟ್ ನೀಡಬೇಕು, ಕೊರೋನ ಬಂದರೆ ಉತ್ತಮ ಚಿಕಿತ್ಸೆ ನೀಡಿ ಗುಣಪಡಿಸಬೇಕು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಅನ್‍ಲಾಕ್ ಮಾಡಲು ಬಟ್ಟೆ ವ್ಯಾಪಾರಿಗಳ ಮನವಿ

ಜು.22ರಿಂದ ಬೆಂಗಳೂರು ಅನ್‍ಲಾಕ್ ಮಾಡುವುದಾದರೆ ನಮಗೂ ವ್ಯಾಪಾರಕ್ಕೆ ಅನುಮತಿ ನೀಡಿ ಎಂದು ಸರಕಾರಕ್ಕೆ ಚಿಕ್ಕಪೇಟೆ ಹೋಲ್ ಸೇಲ್ ಬಟ್ಟೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ. ಸೀಲ್‍ಡೌನ್‍ಗೂ ಮೊದಲು ಚಿಕ್ಕಪೇಟೆಯಿಂದಲೇ ಹೆಚ್ಚು ಕೊರೋನ ಹರಡುತ್ತಿದೆ ಎನ್ನಲಾಗಿತ್ತು. ಆದರಿಂದ ಬಟ್ಟೆ ವ್ಯಾಪಾರಿಗಳ ಸಂಘ ಸೀಲ್‍ಡೌನ್‍ಗೆ ಅನುಮತಿ ಸೂಚಿಸಿ ತಮ್ಮೆಲ್ಲ ವ್ಯಾಪಾರ ವಹಿವಾಟುಗಳನ್ನ ನಿಲ್ಲಿಸಿತ್ತು. ಆದರೆ ಚಿಕ್ಕಪೇಟೆ ಸೀಲ್‍ಡೌನ್ ಆದಮೇಲೂ ಸೋಂಕಿನ ಪ್ರಕರಣಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ. ಹಾಗಾಗಿ ಬೆಂಗಳೂರು ಅನ್‍ಲಾಕ್ ಮಾಡುವುದಾದರೆ ನಮಗೂ ವ್ಯಾಪಾರಕ್ಕೆ ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News