ಕಾಸರಗೋಡು: ಕೊರೋನ ಸೋಂಕಿಗೆ ಜಿಲ್ಲೆಯಲ್ಲಿ 2ನೇ ಮೃತ್ಯು

Update: 2020-07-22 05:26 GMT

ಕಾಸರಗೋಡು, ಜು.22: ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಎರಡನೇ ಬಲಿಯಾಗಿದ್ದು, ಸೋಂಕಿಗೆ ತುತ್ತಾಗಿದ್ದ ನಗರ ಹೊರವಲಯದ ಅಣಂಗೂರು ಪಚ್ಚೆಕ್ಕಾಡ್ ನ 48 ವರ್ಷದ ಮಹಿಳೆ ಬುಧವಾರ ಮುಂಜಾನೆ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸೋಂಕಿನಿಂದ ಮೃತಪಟ್ಟ ಇಬ್ಬರೂ ಮಹಿಳೆಯರಾಗಿದ್ದಾರೆ.

ಈ ಮಹಿಳೆಯನ್ನು ಜ್ವರದ ಕಾರಣ ಕೆಲದಿನಗಳ ಹಿಂದೆ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದಾಗ ಕೊರೋನ ಪಾಸಿಟಿವ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಜು.20ರಂದು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರಿಂದು ಮುಂಜಾನೆ ಮೃತಪಟ್ಟಿದ್ದಾರೆ. ಇವರಿಗೆ ಸೋಂಕು ಎಲ್ಲಿಂದ ತಗಲಿತ್ತು ಎಂಬುದು ಇನ್ನೂ ದೃಢಪಟ್ಟಿಲ್ಲ.

ಮಹಿಳೆಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮನೆಯವರ ಗಂಟಲ ದ್ರವವನ್ನು ತಪಾಸಣೆಗೆ ಕಳುಹಿಸಲಾಗಿದೆ. ಆದರೆ ಈ ಮನೆ ಮಂದಿಯಲ್ಲಿ ಇದುವರೆಗೆ ಯಾರಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿಕೋಂಡಿಲ್ಲ ಎಂದು ತಿಳಿದುಬಂದಿದೆ.

ಪಾಸಿಟಿವ್ ಪ್ರಕರಣಗಳಲ್ಲಿ ಹೆಚ್ಚಳ

ಜಿಲ್ಲೆಯಲ್ಲಿ ಮೂರನೇ ಹಂತದಲ್ಲಿ ಸಂಪರ್ಕದಿಂದ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು, ಮಂಗಳವಾರ ಸೋಂಕು ದೃಢಪಟ್ಟ 40 ಮಂದಿಯಲ್ಲಿ 37 ಮಂದಿಗೂ ಸಂಪರ್ಕದಿಂದ ಸೋಂಕು ತಗಲಿತ್ತು. ಜು.18ರಂದು ಉಪ್ಪಳ ಹಿದಾಯತ್ ನಗರದ ಮಹಿಳೆಯೋರ್ವರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದರು. ಇವರಿಗೂ ಸಂಪರ್ಕದಿಂದ ಸೋಂಕು ತಗಲಿತ್ತು.

ಫೆಬ್ರವರಿ 3ರಂದು ಜಿಲ್ಲೆಯಲ್ಲಿ ಮೊದಲ ಕೊರೋನ ಪ್ರಕರಣದ ದೃಢಪಟ್ಟಿತ್ತು. ಬಳಿಕ ಎರಡು ಹಂತಗಳಲ್ಲಿ 178 ಮಂದಿಯಲ್ಲಿ ಸೋಂಕು ಪತ್ತೆಯಾಗಿ ಎಲ್ಲರೂ ಗುಣಮುಖರಾಗಿದ್ದರು. ಸಂಪೂರ್ಣ ಸೋಂಕುಮುಕ್ತವಾಗಿದ್ದ ಜಿಲ್ಲೆಯಲ್ಲಿ ಮೇ ಮೊದಲ ವಾರದಲ್ಲಿ ಮತ್ತೆ ಸೋಂಕು ಪತ್ತೆಯಾಗಿತ್ತು.

ಮೂರನೇ ಹಂತದಲ್ಲಿ 794 ಮಂದಿ ಸೋಂಕಿಗೆ ಪಾಸಿಟಿವ್ ಆಗಿದ್ದು,  ಈ ಪೈಕಿ 311 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಇದುವರೆಗೆ ಜಿಲ್ಲೆಯಲ್ಲಿ 972 ಮಂದಿಗೆ ಸೋಂಕು ದ್ರಢಪಟ್ಟಿದ್ದು, 542 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 429 ಮಂದಿ ಚಿಕಿತ್ಸೆಯಲ್ಲಿದ್ದಾರೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News