ಮಂಗಳೂರು: ಎಪಿಎಂಸಿಗೆ ಸ್ಥಳಾಂತರಿತ ಸಗಟು ವ್ಯಾಪಾರಿಗಳು ಲೈಸನ್ಸ್ ಪಡೆಯಲು ಸೂಚನೆ

Update: 2020-07-22 13:53 GMT

ಮಂಗಳೂರು, ಜು.22: ನಗರದ ಸೆಂಟ್ರಲ್ ಮಾರುಕಟ್ಟೆಯಿಂದ ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರಗೊಂಡ ಸಗಟು ಹಣ್ಣು ಮತ್ತು ತರಕಾರಿ ವ್ಯಾಪಾರಸ್ಥರು ಆಗಸ್ಟ್ 1ರಿಂದ ಅನ್ವಯಗೊಳ್ಳುವಂತೆ ಲೈಸನ್ಸ್ ಪಡೆದು ವ್ಯಾಪಾರ ಮುಂದುವರಿಸಲು ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಸೂಚನೆ ನೀಡಿದ್ದಾರೆ.

ಜಿಲ್ಲಾಡಳಿತದ ಆದೇಶದಂತೆ ಸೆಂಟ್ರಲ್ ಮಾರುಕಟ್ಟೆಯಿಂದ ಬೈಕಂಪಾಡಿಯ ಎಪಿಎಂಸಿಗೆ ವ್ಯಾಪಾರಿಗಳು ಸ್ಥಳಾಂತರಗೊಂಡಿದ್ದು, ಕಳೆದ 3-4 ತಿಂಗಳಿಂದ ಈ ವ್ಯಾಪಾರಸ್ಥರು ಎಪಿಎಂಸಿಯಲ್ಲಿ ಲಭ್ಯವಿರುವ ಗೋದಾಮುಗಳನ್ನು ತಾತ್ಕಾಲಿಕವಾಗಿ ಉಪಯೋಗಿಸಿಕೊಂಡು ವ್ಯಾಪಾರ ಮುಂದುವರೆಸಿದ್ದಾರೆ.

ಜನಪ್ರತಿನಿಧಿಗಳ ಮತ್ತು ಜಿಲ್ಲಾಡಳಿತದ ಸೂಚನೆಯ ಮೇರೆಗೆ ಇಲಾಖೆಯ ಅನುಮತಿ ಪಡೆದುಕೊಂಡು ವ್ಯಾಪಾರಸ್ಥರಿಗೆ ಉಚಿತವಾಗಿ ಯಾವುದೇ ಬಾಡಿಗೆ, ವಿದ್ಯುತ್ ಶುಲ್ಕ ಮತ್ತು ನೀರಿನ ಶುಲ್ಕವನ್ನು ವಿಧಿಸದೆ ಸುಮಾರು 1 ಕೋ.ರೂ. ವೆಚ್ಚ ಮಾಡಿ ಮೂಲಭೂತ ಸೌಕರ್ಯ ಒದಗಿಸಿಕೊಡಲಾಗಿತ್ತು. ಈಗಾಗಲೇ ವ್ಯಾಪಾರಸ್ಥರಿಗೆ ಘೋಷಿಸಿರುವ ರಿಯಾಯಿತಿ ಅವಧಿಯು ಮುಗಿದಿರುವುದರಿಂದ ಬೈಕಂಪಾಡಿ ಎಪಿಎಂಸಿ ಯಾರ್ಡ್ ಒಳಗಡೆ ಕಾರ್ಯನಿರ್ವಹಿಸುವ ಹಣ್ಣು ಮತ್ತು ತರಕಾರಿ ಸಗಟು ವ್ಯಾಪಾರಸ್ಥರು ಲೀವ್ ಆ್ಯಂಡ್ ಲೈಸನ್ಸ್ ಅನ್ವಯ ಗೋದಾಮುಗಳನ್ನು ಹಂಚಿಕೆ ಪಡೆದುಕೊಳ್ಳಲು ಪೂರ್ವಭಾವಿಯಾಗಿ ತಕ್ಷಣದಿಂದ ಲೈಸನ್ಸ್‌ನ್ನು ಎಪಿಎಂಸಿ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದುಕೊಂಡು ಎಪಿಎಂಸಿ ವಿಧಿಸುವ ಷರತ್ತುಗಳನ್ವಯ ಆ.1ರಿಂದ ವ್ಯಾಪಾರ ಮುಂದುವರೆಸಿ ಸಹಕರಿಸಬೇಕು ಎಂದು ಕೃಷ್ಣರಾಜ ಹೆಗ್ಡೆ ಮನವಿ ಮಾಡಿದ್ದಾರೆ.

ಲೈಸನ್ಸ್ ಪಡೆದುಕೊಳ್ಳದೆ ಬೈಕಂಪಾಡಿ ಮಾರುಕಟ್ಟೆ ಪ್ರಾಂಗಣದಲ್ಲಿ ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಸಿದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಪ್ರಕಾರ ಕಷ್ಟವಾಗುತ್ತದೆ. ಇದನ್ನು ಮನಗಂಡು ಎಲ್ಲಾ ಸಗಟು ವ್ಯಾಪಾರಸ್ಥರು ಎಪಿಎಂಸಿ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News