ನೂತನ ಕೈಗಾರಿಕಾ ನೀತಿ 2020-25ಕ್ಕೆ ಸಚಿವ ಸಂಪುಟ ಅನುಮೋದನೆ: ಸಚಿವ ಜಗದೀಶ್ ಶೆಟ್ಟರ್

Update: 2020-07-23 13:26 GMT

ಬೆಂಗಳೂರು, ಜು. 23: ರಾಜ್ಯದಲ್ಲಿ ಮುಂಬರುವ ಐದು ವರ್ಷಗಳಲ್ಲಿ 5ಲಕ್ಷ ಕೋಟಿ ರೂ.ಬಂಡವಾಳ ಆಕರ್ಷಣೆ, 20 ಲಕ್ಷ ಉದ್ಯೋಗ ಸೃಷ್ಟಿ ಹಾಗೂ ಹಿಂದುಳಿದ ಜಿಲ್ಲೆಗಳಲ್ಲಿ ಕೈಗಾರಿಕಾಭಿವೃದ್ಧಿಗೆ ಆದ್ಯತೆ ನೀಡುವ `ನೂತನ ಕೈಗಾರಿಕಾ ನೀತಿ 2020-25'ಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದ್ದು, ಕರ್ನಾಟಕ ರಾಜ್ಯವನ್ನು ಮತ್ತಷ್ಟು ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿ ಮಾಡುವತ್ತ ಪ್ರಮುಖ ಹೆಜ್ಜೆಯನ್ನಿಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಸಮತೋಲಿತ, ಸುಸ್ಥಿರ ಮತ್ತು ಸಮಗ್ರ ಕೈಗಾರಿಕಾಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರಕಾರವು ಐದು ವರ್ಷಗಳ ಅವಧಿಗೆ ನೂತನ ಕೈಗಾರಿಕಾ ನೀತಿಯನ್ನು ಹೊರತರುತ್ತಿದೆ. 2014ರಲ್ಲಿ ಕೈಗಾರಿಕಾ ನೀತಿಯನ್ನು ಹೊರತಂದಿದ್ದು, ತದನಂತರ ಅನೇಕ ಬದಲಾವಣೆಗಳು ಆಗಿ ಉತ್ಪಾದನೆ ಮತ್ತು ಉತ್ಪಾದನಾ ಸಂಬಂಧಿತ ಸೇವಾ ಕೈಗಾರಿಕೆಗಳು, ಇದರ ಜೊತೆಗೆ ಸ್ಮಾರ್ಟ್ ಉತ್ಪಾದನೆ, ಗ್ರಾಹಕೀಕರಣ, ಸಹಕಾರತ್ವದ ಉತ್ಪಾದನೆ ಇತ್ಯಾದಿ ಬೆಳವಣಿಗೆಗಳನ್ನು ಒಳಗೊಂಡಂತೆ ಹೊಸ ಅವಕಾಶಗಳು ಹೊರ ಹೊಮ್ಮಿತ್ತಿವೆ ಎಂದು ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದರು.

ರಾಜ್ಯದಲ್ಲಿ ಕೈಗಾರಿಕಾ ಶಕ್ತಿಯನ್ನು ಬಳಸಿಕೊಂಡು, ಕೈಗಾರೀಕರಣಕ್ಕಾಗಿ ಪರಿಸರವನ್ನು ಶಕ್ತಗೊಳಿಸುವುದು, ಮೂಲ ಸೌಕರ್ಯಗಳ ಅಭಿವೃದ್ಧಿ, ರಾಜ್ಯದ ಜನರಿಗೆ ವಿಶೇಷವಾಗಿ ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಹಾಗೂ ಎರಡು ಮತ್ತು ಮೂರನೆ ಹಂತದ ನಗರಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸುವುದು ಹಾಗೂ ಬಂಡವಾಳ ಹೂಡಿಕೆ ಆಕರ್ಷಣೆಯನ್ನು ರಾಜ್ಯದಲ್ಲಿ ಖಾತರಿಪಡಿಸಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ರಾಜಧಾನಿ ಬೆಂಗಳೂರಿನಿಂದ ಹೊರಗೆ ಕೈಗಾರಿಕೆಗಳನ್ನು ಟಯರ್-2 ಹಾಗೂ ಟಯರ್-3 ನಗರಗಳಲ್ಲಿ ವಿಸ್ತರಿಸುವ ಧ್ಯೇಯವನ್ನು 'ನೂತನ ಕೈಗಾರಿಕಾ ನೀತಿ' ಹೊಂದಿರುತ್ತದೆ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ಕೈಗಾರಿಕಾಭಿವೃದ್ಧಿಗೆ ಬಂಡವಾಳ ಹೂಡಿಕೆಗಳಿಗೆ ರಿಯಾಯಿತಿ ಒದಗಿಸಲು ಮೂರು ವಲಯಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಝೋನ್-1 ಹಾಗೂ 2ರಡಿ ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳು ಸೇರಿರುತ್ತವೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳನ್ನು ಜೋನ್-3ರಲ್ಲಿ ವರ್ಗೀಕರಿಸಲಾಗಿದೆ ಎಂದರು.

ಧಾರವಾಡ, ಗದಗ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳನ್ನೊಳಗೊಂಡ ಧಾರವಾಡ ವಲಯ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಶಿವಮೊಗ್ಗ ವಲಯ ಹಾಗೂ ಕಲ್ಯಾಣ ಕರ್ನಾಟಕದ ಕಲಬುರ್ಗಿ ವಿಶೇಷ ಹೂಡಿಕೆ ವಲಯಗಳನ್ನಾಗಿ ಮಾಡಲಾಗಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಕ್ಷೇತ್ರಗಳು: ಆಟೋಮೊಬೈಲ್ಸ್, ಆಟೋ ಕಾಂಪೋನೆಂಟ್ಸ್, ಫಾರ್ಮಾಕ್ಯೂಟಿಕಲ್, ವೈದ್ಯಕೀಯ ಉಪಕರಣಗಳು, ಇಂಜಿನಿಯರಿಂಗ್, ಮೆಷಿನ್ ಟೂಲ್ಸ್, ನಾಲೆಡ್ಜ್ ಬೇಸ್ಡ್ ಇಂಡಸ್ಟ್ರೀಸ್, ಲಾಜಿಸ್ಟಿಕ್ಸ್, ರಿನಿವೇಬಲ್ ಎನರ್ಜಿ, ಏರೋಸ್ಪೇಸ್, ಡಿಫೆನ್ಸ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್ ಕ್ಷೇತ್ರವೂ ಸೇರಿದಂತೆ ಸ್ಪರ್ಧಾತ್ಮಕ ಸಾಮರ್ಥ್ಯ ಮತ್ತು ಬೆಳವಣಿಗೆ ಸಾಮರ್ತ್ಯದ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ಎಂಎಸ್‍ಎಂಇಗಳಿಗೆ ಉತ್ತೇಜನ: ಎಂಎಸ್‍ಎಂಇಗಳ ಅಭಿವೃದ್ಧಿ ಮತ್ತು ಉತ್ತೇಜನಕ್ಕೆ ಆಸ್ಥೆ ವಹಿಸಲಾಗಿದೆ. ಕೆಐಎಡಿಬಿಯು ತನ್ನ ಕೈಗಾರಿಕಾ ಪ್ರದೇಶಗಳಲ್ಲಿ ಎಂಎಸ್‍ಎಂಇಗಳಿಗಾಗಿ ಶೇ.30ರಷ್ಟು ಹಂಚಿಕೆಯ ಜಮೀನನ್ನು ಮೀಸಲಿಡುವುದು. ತಂತ್ರಜ್ಞಾನ ಉನ್ನತೀಕರಣ ಮತ್ತು ತಾಂತ್ರಿಕ ಬೆಂಬಲ, ಸಾರ್ವಜನಿಕ ಸಂಗ್ರಹಣೆಯಲ್ಲಿ ಮಾರುಕಟ್ಟೆ ಬೆಂಬಲ, ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

ಬದಲಾವಣೆ: ಕೋವಿಡ್-19ರ ನಂತರ ಹೊಸ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಬೃಹತ್ ಬಂಡವಾಳವನ್ನು ಎಲ್ಲ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ, ಈ ನೀತಿಯಲ್ಲಿ ಹಲವು ಸುಧಾರಣೆಗಳನ್ನು ತಂದಿದ್ದು, ಮುಖ್ಯವಾಗಿ ಭೂಮಿ ಸಂಗ್ರಹಣೆ, ಕಾರ್ಮಿಕ ಕಾನೂನುಗಳ ಸುಧಾರಣೆ ಹಾಗೂ ಆಕರ್ಷಕ ರಿಯಾಯಿತಿ ಹಾಗೂ ಉತ್ತೇಜನ ನೀಡಲಾಗಿದೆ. ಜಮೀನನ್ನು ಸುಲಭವಾಗಿ ಲಭ್ಯವಾಗುವಂತೆ ಭೂ ಸುಧಾರಣಾ ಕಾಯ್ದೆ 1961ರ ಸೆಕ್ಷನ್ 109ಕ್ಕೆ ತಿದ್ದುಪಡಿ ತರಲಾಗಿದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News