ದ.ಕ. ಜಿಲ್ಲೆಯಲ್ಲಿ ಮತ್ತೆ ಎಂಟು ಮಂದಿ ಕೋವಿಡ್ ಗೆ ಬಲಿ: ಶುಕ್ರವಾರ 180 ಮಂದಿಗೆ ಸೋಂಕು ದೃಢ

Update: 2020-07-24 14:44 GMT

ಮಂಗಳೂರು, ಜು.24: ದ.ಕ. ಜಿಲ್ಲೆಯಲ್ಲಿ ಕೊರೋನ ಹಾವಳಿಯಿಂದಾಗಿ ಬಲಿಯಾಗುತ್ತಿರುವವರ ಸಂಖ್ಯೆ ಶತಕ ತಲುಪಿದ್ದು, ಕೋವಿಡ್‌ಗೆ ಶುಕ್ರವಾರ ಮತ್ತೆ ಎಂಟು ಮಂದಿ ಬಲಿಯಾಗಿದ್ದಾರೆ. ಅಲ್ಲದೆ 180 ಮಂದಿಗೆ ಇಂದು ಸೋಂಕು ದೃಢಪಟ್ಟಿದೆ.

ಜು.13ರಂದು ಜಿಲ್ಲೆಯಲ್ಲಿ 50 ಸಾವು ದಾಖಲಾಗಿದ್ದವು. ಅಲ್ಲಿಂದ ಇಲ್ಲಿಯವರೆಗಿನ ಹತ್ತು ದಿನಗಳಲ್ಲಿ ಮತ್ತೆ 50 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಜಿಲ್ಲೆಯಲ್ಲಿ ನಿಧಾನ ಗತಿಯಲ್ಲಿದ್ದ ಸಾವು ಪ್ರಕರಣ ಬೆರಳೆಣಿಕೆಯ ದಿನಗಳಲ್ಲೇ ದ್ವಿಗುಣಗೊಂಡಿದೆ. ವಿವಿಧ ರೋಗಳಿಂದ ಬಳಲುತ್ತಿರುವವರು ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗುತ್ತಿರುವುದು ಮತ್ತಷ್ಟು ಭೀತಿ ಮೂಡಿಸಿದೆ.

ಶುಕ್ರವಾರ ಕೋವಿಡ್‌ಗೆ ಮತ್ತೆ ಎಂಟು ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. ಇಂದು ಸಾವಿಗೀಡಾದವರೆಲ್ಲ 42 ವರ್ಷ ಮೇಲ್ಪಟ್ಟವರು. ಮೃತರಲ್ಲಿ ಐವರು ಪುರುಷರು ಹಾಗೂ ಮೂವರು ಮಹಿಳೆಯರು. ಆರು ಮಂದಿ ಜಿಲ್ಲೆಯವರಾದರೆ, ಇನ್ನು ಇಬ್ಬರು ಶಿವಮೊಗ್ಗದ ಮೂಲದವರು.

ಮಂಗಳೂರಿನ 44 ವರ್ಷದ ಪುರುಷನಿಗೆ ಉಸಿರಾಟ ತೊಂದರೆ (ರೆಸ್ಪಿರೆಟರಿ ಫೇಲ್ಯೂರ್), ತೀವ್ರ ಉಸಿರಾಟ ತೊಂದರೆ ಸಿಂಡ್ರೋಮ್ (ಎಆರ್‌ಡಿಎಸ್), ಬಹು ಅಂಗಾಂಗ ವೈಫಲ್ಯ, ಅಧಿಕ ರಕ್ತದೊತ್ತಡ, 56 ವರ್ಷದ ವ್ಯಕ್ತಿಗೆ ಮೂತ್ರನಾಳದ ಸೋಂಕು, ಬಹು ಅಂಗಾಂಗ ವೈಫಲ್ಯ, ಸೆಪ್ಟಿಕ್ ಶಾಕ್, ದೀರ್ಘಕಾಲದ ಮಧುಮೇಹ, ಹೈಪೊಥೈರಾಯ್ಡಿಸಮ್, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, 75 ವರ್ಷದ ಮಹಿಳೆಯು ಉಸಿರಾಟ ತೊಂದರೆ, ಸೆಪ್ಟಿಕ್ ಶಾಕ್‌ನೊಂದಿಗೆ ಬಹು ಅಂಗಾಂಗ ವೈಫಲ್ಯ, ದೀರ್ಘಕಾಲದ ಮಧುಮೇಹ, ಅಧಿಕ ರಕ್ತದೊತ್ತಡ, 65 ವರ್ಷದ ಮಹಿಳೆಯು ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದರು.

ಪುತ್ತೂರಿನ 61 ವರ್ಷದ ಮಹಿಳೆಯು ದೀರ್ಘಕಾಲದ ಮಧುಮೇಹ, ಅಧಿಕ ರಕ್ತದೊತ್ತಡ, ಬಂಟ್ವಾಳದ 42 ವರ್ಷದ ಪುರುಷನು ಉಸಿರಾಟ ತೊಂದರೆ, ಮೂತ್ರನಾಳ ಸೋಂಕು, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ 67 ವರ್ಷದ ಪುರುಷನು ನ್ಯುಮೋನಿಯ, ಶ್ವಾಸಕೋಶ ಕಾಯಿಲೆ, 66 ವರ್ಷದ ಪುರುಷನು ದೀರ್ಘಕಾಲದ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಮೃತರೆಲ್ಲ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದರು ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.

ಹೊಸದಾಗಿ 180 ಮಂದಿಗೆ ಸೋಂಕು: ದ.ಕ. ಜಿಲ್ಲೆಯಲ್ಲಿ ಸೋಂಕಿನಿಂದ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಒಂದು ಕಡೆಯಾದರೆ ಇದುವರೆಗೆ ಸೋಂಕು ತಗುಲಿದವರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಶುಕ್ರವಾರ ಒಂದೇ ದಿನ 180 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 

ಶುಕ್ರವಾರದ ಸೋಂಕಿತರ ಪಟ್ಟಿಯಲ್ಲಿ ಶೀತ ಲಕ್ಷಣ ಹೊಂದಿದವರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಶೀತ- 68 ಮಂದಿ, ಸೋಂಕಿತರ ಸಂಪರ್ಕದಲ್ಲಿದ್ದ 56 ಮಂದಿ, ತೀವ್ರ ಉಸಿರಾಟ ತೊಂದರೆ- 10, ಸೋಂಕು ನಿಗೂಢ ಪ್ರಕರಣ- 45, ವಿದೇಶದಿಂದ ಆಗಮಿಸಿದ್ದ ಓರ್ವನಿಗೆ ಸೋಂಕು ತಗುಲಿದೆ. ಸೋಂಕಿತರನ್ನು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಹೊಸದಾಗಿ 180 ಮಂದಿಗೆ ಸೋಂಕು ತಗುಲುವ ಜೊತೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,394ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 125 ಮಂದಿ ವಿವಿಧ ಆಸ್ಪತ್ರೆಗಳಿಂದ ಕೊರೋನ ಮುಕ್ತರಾಗಿದ್ದಾರೆ. ಇಲ್ಲಿಯವರೆಗೆ 1,987 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನು 2,300 ಸಕ್ರಿಯ ಪ್ರಕರಣಗಳಿವೆ. ಬಹುತೇಕ ಮಂದಿಯ ಆರೋಗ್ಯ ಉತ್ತಮ ಸ್ಥಿತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News