ದ.ಕ. ಜಿಲ್ಲೆಯಲ್ಲಿ ಮತ್ತೆ ಎಂಟು ಮಂದಿ ಕೋವಿಡ್‌ಗೆ ಬಲಿ

Update: 2020-07-25 15:24 GMT

ಮಂಗಳೂರು, ಜು.25: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ ಸಾವು ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಶನಿವಾರ ಎಂಟು ಮಂದಿ ಮೃತಪಟ್ಟು, ಹೊಸದಾಗಿ 218 ಮಂದಿಗೆ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಸೋಂಕಿನಿಂದ ರೋಗಗ್ರಸ್ಥರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಶುಕ್ರವಾರವಷ್ಟೇ ಎಂಟು ಮಂದಿ ಬಲಿಯಾಗಿದ್ದರು. ಶನಿವಾರವೂ ಅಷ್ಟೇ ಸಂಖ್ಯೆಯ ಮಂದಿ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ್ದಾರೆ. ಕೊರೋನದಿಂದ ಮೃತಪಟ್ಟವರ ಸಂಖ್ಯೆ 115ಕ್ಕೆ ಏರಿಕೆಯಾಗಿದೆ.ಇದರಿಂದ ಸಹಜವಾಗಿಯೇ ಜಿಲ್ಲೆಯಲ್ಲಿ ಆತಂಕದ ಛಾಯೆ ಮೂಡಿದೆ.

ಶನಿವಾರ ಮೃತಪಟ್ಟವರ ಪೈಕಿ ಏಳು ಮಂದಿ ಮಂಗಳೂರು ತಾಲೂಕಿನವರಾದರೆ, ಓರ್ವ ಕೇರಳದ ಕಾಸರಗೋಡು ಮೂಲದವರು. ಮೃತರೆಲ್ಲ ಹಿರಿಯ ನಾಗರಿಕರೇ ಆಗಿದ್ದಾರೆ. ಏಳು ಮಂದಿ ಮಂಗಳೂರು ನಿವಾಸಿಗಳಾಗಿದ್ದರೆ, ಒಬ್ಬರು ಕೇರಳದ ಮಂಜೇಶ್ವರದವರು.

53 ವರ್ಷಕ್ಕಿಂತ ಮೇಲ್ಪಟ್ಟವರೇ ಇಂದು ಮೃತಪಟ್ಟಿದ್ದಾರೆ. ಇವರಲ್ಲಿ ಆರು ಮಂದಿ ಪುರುಷರಿದ್ದರೆ, ಇಬ್ಬರು ಮಹಿಳೆಯರಿದ್ದಾರೆ. ಎಲ್ಲರೂ ಖಾಸಗಿ ಆಸ್ಪತ್ರೆಗಳಲ್ಲೇ ಸಾವಿಗೀಡಾಗಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಜಿಲ್ಲಾಡಳಿತ ಸರ್ವ ಕ್ರಮ ಕೈಗೊಂಡಿದೆ.

ಮಂಗಳೂರಿನ 88 ವರ್ಷದ ವೃದ್ಧ ಶ್ವಾಸಕೋಶ ಸಮಸ್ಯೆ, ತೀವ್ರ ಉಸಿರಾಟ ತೊಂದರೆ, ಮೂತ್ರಪಿಂಡ ವೈಫಲ್ಯ, 78 ವರ್ಷದ ವೃದ್ಧ ಬ್ಯಾಕ್ಟೀರಿಯ ಸೋಂಕು, ಶ್ವಾಸಕೋಶ ಸಮಸ್ಯೆ, ತೀವ್ರ ಉಸಿರಾಟ ತೊಂದರೆ, 67 ವರ್ಷದ ವೃದ್ಧ ‘ಸೆಪ್ಸಿಸ್ ವಿತ್ ಸೆಪ್ಟಿಕ್ ಶಾಕ್’, 68 ವರ್ಷದ ವೃದ್ಧ ಸೆಪ್ಟಿಕ್ ಶಾಕ್, 75 ವರ್ಷದ ವೃದ್ಧ ಶ್ವಾಸಕೋಶ ಸಮಸ್ಯೆ, ತೀವ್ರ ಉಸಿರಾಟ ತೊಂದರೆ, 68 ವರ್ಷದ ವೃದ್ಧ ತೀವ್ರ ಉಸಿರಾಟ ತೊಂದರೆ, ತೀವ್ರ ಪರಿಧಮನಿ ಸಮಸ್ಯೆಯಿಂದ (Acute Coronary event) ಬಳಲುತ್ತಿದ್ದರು.

ನಗರದ 76 ವರ್ಷದ ವೃದ್ಧೆಯು ನ್ಯುಮೋನಿಯ, ಅಧಿಕ ರಕ್ತದೊತ್ತಡ, ಶ್ವಾಸಕೋಶ ಸಮಸ್ಯೆ, ತೀವ್ರ ಉಸಿರಾಟ ತೊಂದರೆ, ದೀರ್ಘಕಾಲದ ಮಧುಮೇಹ, ಕೇರಳದ ಕಾಸರಗೋಡು ತಾಲೂಕಿನ ಮಂಜೇಶ್ವರ ನಿವಾಸಿ 53 ವರ್ಷ ಮಹಿಳೆಯು ಸೆಪ್ಸಿಸ್ ಜೊತೆಗೆ ಬಹು ಅಂಗಾಂಗ ವೈಫಲ್ಯ, ಹೃದಯಾಘಾತ, ಅಧಿಕ ರಕ್ತದೊತ್ತಡ, ಎರಡನೇ ಬಗೆಯ ದೀರ್ಘಕಾಲದ ಮಧುಮೇಹ, ಬಾಹ್ಯ ನಾಳೀಯ ಕಾಯಿಲೆ (Peripheral vascular disease) ಯಿಂದ ಬಳಲುತ್ತಿದ್ದರು. ಮೃತಪಟ್ಟವರಿಗೆಲ್ಲ ಕೊರೋನ ಸೋಂಕು ತಗುಲಿತ್ತು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

218 ಮಂದಿಗೆ ಸೋಂಕು: ಕೋವಿಡ್ ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಹೊಸದಾಗಿ 218 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,612ಕ್ಕೆ ಏರಿಕೆಯಾಗಿದೆ.

ಆತಂಕಕಾರಿ ವಿಚಾರವೆಂದರೆ ಇದೇ ಮೊದಲ ಬಾರಿಗೆ ಸೋಂಕಿನ ಮೂಲವೇ ಪತ್ತೆಯಾಗದವರ ಸಂಖ್ಯೆ (70) ಶನಿವಾರ ಗರಿಷ್ಠ ಪ್ರಮಾಣಕ್ಕೇರಿದೆ. ಇದುವರೆಗೆ ಈ ಸಂಖ್ಯೆ 30-50ರ ಆಸುಪಾಸಿನಲ್ಲಿತ್ತು. ಇದೀಗ ದಿಢೀರ್ ಏರಿಕೆಯಾಗಿದೆ. ಉಳಿದಂತೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 46 ಮಂದಿಗೆ, 87 ಐಎಲ್‌ಐ ಪ್ರಕರಣಗಳು, 15 ಸಾರಿ ಪ್ರಕರಣಗಳು ಪತ್ತೆಯಾಗಿವೆ.

140 ಗುಣಮುಖ: ಜಿಲ್ಲೆಯ ವಿವಿಧ ಆಸ್ಪತ್ರೆಗಳು, ಆರೈಕೆ ಕೇಂದ್ರ, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 140 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರ ಸಂಖ್ಯೆ 2,127ಕ್ಕೇರಿದೆ. ವಿವಿಧ ಆಸ್ಪತ್ರೆಗಳಲ್ಲಿ 2,370 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News