ಲಾಕ್‌ಡೌನ್: ನಾಲ್ಕನೆ ರವಿವಾರವೂ ಉಡುಪಿ ಸಂಪೂರ್ಣ ಸ್ತಬ್ಧ

Update: 2020-07-26 12:39 GMT

ಉಡುಪಿ, ಜು. 26: ಕೋವಿಡ್-19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ನಾಲ್ಕನೆ ಸಂಡೇ ಲಾಕ್‌ಡೌನ್ ಕೂಡ ಯಶಸ್ವಿಯಾಗಿದ್ದು, ಇಂದು ಇಡೀ ಜಿಲ್ಲೆಯಲ್ಲಿ ಯಾವುದೇ ವ್ಯವಹಾರಗಳು ನಡೆಯದೆ ಸಂಪೂರ್ಣ ಸ್ತಬ್ಧಗೊಂಡಿತ್ತು.

ಜಿಲ್ಲೆಯ ಉಡುಪಿ ನಗರ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ, ಕಾಪುಗಳಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ರಾಷ್ಟ್ರೀಯ ಹೆದ್ದಾರಿ ಸಮೇತ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕೆಲವು ಮಂದಿ ಅನಾವಶ್ಯಕವಾಗಿ ವಾಹನಗಳಲ್ಲಿ ತಿರುಗಾಡುತ್ತಿರುವುದು ಕಂಡುಬಂತು. ನಗರದ ಕಲ್ಸಂಕದಲ್ಲಿ ನಿರ್ಮಿಸಿರುವ ಚೆಕ್‌ಪೋಸ್ಟ್ ‌ನಲ್ಲಿ ನಗರ ಸಂಚಾರ ಪೊಲೀಸರು ವಾಹನ ತಪಾಸಣೆ ಕಾರ್ಯ ನಡೆಸಿದರು. ಈ ವೇಳೆ ಲಾಕ್‌ಡೌನ್ ಆದೇಶ ಉಲ್ಲಂಘಿಸಿ, ಅನಾವಶ್ಯಕವಾಗಿ ಹೊರಗಡೆ ತಿರುಗಾಡುತ್ತಿದ್ದ ದ್ವಿಚಕ್ರ ಹಾಗೂ ಲಘು ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ಒಟ್ಟು 10ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಂಚಾರ ಪೊಲೀಸ್ ಉಪನಿರೀಕ್ಷಕ ಅಬ್ದುಲ್ ಖಾದರ್ ತಿಳಿಸಿದ್ದಾರೆ.

ವೈದ್ಯಕೀಯ ಸೇವೆ, ಹಾಲು, ಸರಕು ಸಾಗಾಟ ಸೇರಿದಂತೆ ಅಗತ್ಯ ಸೇವೆಗಳು ಹೊರತು ಪಡಿಸಿ, ಉಳಿದಂತೆ ಎಲ್ಲ ವ್ಯವಹಾರಗಳು ಸ್ಥಗಿತಗೊಂಡಿದ್ದವು. ಇದರಿಂದ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಪ್ರದೇಶಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಕಳೆದ ಮೂರು ರವಿವಾರ ತೆರೆಯದ ಹೊಟೇಲುಗಳು ಈ ರವಿವಾರ ಕೆಲವು ಹೊಟೇಲ್‌ಗಳು ತೆರೆದಿದ್ದು, ಪಾರ್ಸೆಲ್ ಮಾತ್ರ ನೀಡಲಾಗುತ್ತಿತ್ತು. ಜನ ಕೊರೋನ ಭೀತಿಯಿಂದ ಹೊರಗಡೆ ತಿರುಗಾಡದೆ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಎಲ್ಲ ಕಡೆಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News