ಬೀಡಿ ಕಾರ್ಮಿಕರ ತುಟ್ಟಿಭತ್ತೆ: ರಾಜ್ಯ ಸರಕಾರದ ನಡೆಗೆ ಕಾರ್ಮಿಕ ಸಂಘಟನೆಗಳ ಆಕ್ರೋಶ

Update: 2020-07-27 13:43 GMT

ಮಂಗಳೂರು, ಜು.27: ರಾಜ್ಯ ಸರಕಾರವು ಬೀಡಿ ಮಾಲಕರ ಒತ್ತಡಕ್ಕೆ ಮಣಿದು ಬೀಡಿ ಕಾರ್ಮಿಕರಿಗೆ ನ್ಯಾಯಯುತವಾಗಿ ಎಪ್ರಿಲ್‌ನಿಂದ ಸಿಗಬೇಕಾದ ವ್ಯತ್ಯಸ್ಥ ತುಟ್ಟಿಭತ್ತೆ (ವಿಡಿಎ)ಯನ್ನು 2021 ಮಾರ್ಚ್‌ವರೆಗೆ ಮುಂದೂಡಿದೆ. ಈ ಕ್ರಮ ಖಂಡನೀಯ. ಇದನ್ನು ಹಿಂದಕ್ಕೆ ಪಡೆಯದಿದ್ದರೆ ಬೀಡಿ ಕಂಪನಿ ಹಾಗೂ ಕಾರ್ಮಿಕ ಆಯುಕ್ತರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.

ಸೋಮವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಎಂಎಸ್ ಮುಖಂಡ ವಿಶ್ವನಾಥ ಶೆಟ್ಟಿ ಹಾಗೂ ಪುರುಷೋತ್ತಮ, ಎಚ್‌ಎಂಎಸ್ ಮುಖಂಡ ಸುರೇಶ್ಚಂದ್ರ ಶೆಟ್ಟಿ ಮತ್ತು ಮುಹಮ್ಮದ್ ರಫಿ ಎಐಟಿಯುಸಿ ಮುಖಂಡ ವಿ.ಸೀತಾರಾಂ ಬೇರಿಂಜ ಮತ್ತು ಎಚ್.ವಿ.ರಾವ್, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಹಾಗೂ ವಸಂತ ಆಚಾರಿ ಅವರು ಜು.29ರಂದು ಬೆಳಗ್ಗೆ 10:30ಕ್ಕೆ ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ಹಾಗೂ ಆ.4ರಿಂದ 6ರ ವರೆಗೆ ವಿಡಿಎ ನೀಡದ ಬೀಡಿ ಕಂಪನಿಗಳ ಡಿಪೋ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.

ಸದ್ಯಕ್ಕೆ ಈ ಪ್ರತಿಭಟನೆ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯಲಿದೆ. ಈ ಜಿಲ್ಲೆಗಳಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಬೀಡಿ ಕಾರ್ಮಿಕರಿದ್ದಾರೆ. ಈ ಕಾರ್ಮಿಕರಿಗೆ 2020 ಎಪ್ರಿಲ್‌ನಿಂದ ಏರಿಕೆಯಾದ ಗ್ರಾಹಕರ ಬೆಲೆ ಸೂಚ್ಯಂಕ 348 ಅಂಕಗಳಾಗಿದ್ದು, ಸಾವಿರ ಬೀಡಿಗೆ 13.92 ರೂ.ವನ್ನು ಬೀಡಿ ಮಾಲಕರು ನೀಡಬೇಕು. ಆದರೆ ಗಣೇಶ್ ಬೀಡಿ ಹೊರತುಪಡಿಸಿದರೆ ಬೇರೆ 27ಕ್ಕೂ ಅಧಿಕ ಬ್ರಾಂಡ್‌ಗಳ ಬೀಡಿಗಳು ಮತ್ತು ನೂರಕ್ಕೂ ಅಧಿಕ ಸಣ್ಣ ಬೀಡಿ ಉದ್ದಿಮೆಗಳು ತುಟ್ಟಿಭತ್ತೆ ಮೊತ್ತವನ್ನು ನೀಡಲು ಮುಂದಾಗುತ್ತಿಲ್ಲ. ತುಟ್ಟಿಭತ್ತೆ ವಸೂಲಿಗಿರುವ ಅವಕಾಶವನ್ನು ಮಾರ್ಚ್ ವರೆಗೆ ವಿಸ್ತರಿಸಿರುವುದನ್ನು ಸರ್ಕಾರ ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.

ಕೊರೋನ ಲಾಕ್‌ಡೌನ್ ವೇಳೆ ಬೀಡಿ ಉದ್ದಿಮೆಗಳಿಗೆ ಪರಿಹಾರ ನೀಡಿಲ್ಲ ಅಲ್ಲದೆ ಉದ್ಯೋಗಕ್ಕೂ ಅವಕಾಶ ಕಲ್ಪಿಸಿಲ್ಲ. ಈಗ ತುಟ್ಟಿಭತ್ತೆ ವಿಳಂಬ ಧೋರಣೆ ಅನುಸರಿಸುವ ಮೂಲಕ ಸರಕಾರ ಕಾರ್ಮಿಕ ವಿರೋಧಿ ನಿಲುವು ತಳೆದಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News