ಕುರ್ಬಾನಿಗೆ ನಿರ್ಭೀತಿಯ ಅವಕಾಶ ಕಲ್ಪಿಸಿ: ಪಾಪ್ಯುಲರ್‌ ಫ್ರಂಟ್‌ ಆಗ್ರಹ

Update: 2020-07-28 09:09 GMT

ಮಂಗಳೂರು, ಜು.28: ಬಕ್ರೀದ್‌ ಹಬ್ಬದ ಪ್ರಯುಕ್ತ ನಡೆಯುವ ಕುರ್ಬಾನಿ ಆಚರಣೆಯನ್ನು ನಿರ್ಭೀತಿಯಿಂದ ನಡೆಸಲು ಅವಕಾಶ ಕಲ್ಪಿಸುವಂತೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್‌ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ವಿಭಿನ್ನ ಧಾರ್ಮಿಕ ಹಿನ್ನೆಲೆಯುಳ್ಳ ಭಾರತ ದೇಶದಲ್ಲಿ ಪ್ರತಿಯೋರ್ವ ಪ್ರಜೆಯೂ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಹೊಂದಿರುತ್ತಾನೆ. ಅದರಂತೆ ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್‌ ಹಬ್ಬದಂದು ಕುರ್ಬಾನಿ ಆಚರಿಸುವುದು ಮುಸ್ಲಿಮರ ಸಂವಿಧಾನದತ್ತ ಹಕ್ಕಾಗಿರುತ್ತದೆ. ಮುಸ್ಲಿಮ್ ಧಾರ್ಮಿಕ ಆಚರಣೆಯ ಪ್ರಕಾರ ಈದುಲ್ ಅಝ್ಹಾದ ವೇಳೆ ಪ್ರಾಣಿ ಬಲಿ ಅರ್ಪಣೆಯು ಒಂದು ಮಹತ್ವದ ಆಚರಣೆಯಾಗಿರುತ್ತದೆ. ಆದರೆ ಸಮಾಜದಲ್ಲಿ ಆಶಾಂತಿ ಸೃಷ್ಟಿಸಲು ಬಯಸುತ್ತಿರುವ ಒಂದು ವರ್ಗವು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಮಾತ್ರವಲ್ಲ, ಕಾನೂನುಬದ್ಧ ಜಾನುವಾರು ಸಾಗಾಟಕ್ಕೂ ತೀವ್ರ ಅಡಚಣೆ ಉಂಟು ಮಾಡುತ್ತಿರುವ ಘಟನೆಗಳು ರಾಜ್ಯದ ವಿವಿಧ ಕಡೆಗಳಲ್ಲಿ ವರದಿಯಾಗುತ್ತಿದೆ. ಕೆಲವೊಂದು ಕಡೆಗಳಲ್ಲಿ ಅಧಿಕಾರಿ ವರ್ಗವೂ ಅನಗತ್ಯ ನಿಬಂಧನೆಯನ್ನು ಹೇರುತ್ತಿರುವುದು ಕೂಡ ಕಂಡು ಬರುತ್ತಿದೆ. ಇದು ಸಮಾಜಘಾತುಕ ಶಕ್ತಿಗಳಿಗೆ ನೈತಿಕ ಬಲವನ್ನು ತಂದು ಕೊಡುತ್ತಿದೆ ಎಂದವರು ಪ್ರಕಟನೆಯಲ್ಲಿ ದೂರಿದ್ದಾರೆ.

ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964ರಂತೆ, ಹಬ್ಬ ಹರಿದಿನಗಳಲ್ಲಿ ಕಾನೂನಿನಲ್ಲಿ ನಿಗದಿಪಡಿಸಿದ ಪ್ರಕಾರ ಧಾರ್ಮಿಕ ಸಂಪ್ರದಾಯದಂತೆ ಪ್ರಾಣಿಬಲಿ ಅರ್ಪಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಮುಸ್ಲಿಮ್ ಸಮುದಾಯವು ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿರುವುದಿಲ್ಲ. ಆದುದರಿಂದ ಮುಸ್ಲಿಮರು ಕುರ್ಬಾನಿ ಆಚರಣೆಯನ್ನು ಸುಸೂತ್ರವಾಗಿ ನಡೆಸುವಂತಾಗಲು ರಾಜ್ಯ ಸರಕಾರವು ಮುಕ್ತ ಅವಕಾಶ ಕಲ್ಪಿಸಬೇಕು, ಇದಕ್ಕೆ ಅಡಚಣೆ ಉಂಟು ಮಾಡಿ ಕೋಮು ಸಾಮರಸ್ಯ ಕದಡುವ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಯಾಸಿರ್ ಹಸನ್, ಮುಸ್ಲಿಮರು ಧಾರ್ಮಿಕ ಶಿಷ್ಟಾಚಾರದೊಂದಿಗೆ ಕಾನೂನಿನ ವಿಧಿವಿಧಾನ ಮತ್ತು ಕೋವಿಡ್ 19 ನಿಯಮಾವಳಿಗಳನ್ನು ಪಾಲಿಸಿಕೊಂಡು ಕುರ್ಬಾನಿಯನ್ನು ಆಚರಿಸಬೇಕೆಂದು ಪ್ರಕಟನೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News