ಬೀಡಿ ಕಾರ್ಮಿಕರ ವಿಡಿಎ ಮುಂದೂಡಿಕೆ ಆದೇಶ ಹಿಂಪಡೆಯಲು ಆಗ್ರಹಿಸಿ ಧರಣಿ

Update: 2020-07-29 09:59 GMT

ಮಂಗಳೂರು, ಜು.29: ಕರ್ನಾಟಕ ರಾಜ್ಯ ಸರಕಾರ ಕಾರ್ಮಿಕ ಸಂಘಟನೆಗಳ ವಿರೋಧವನ್ನು ಲೆಕ್ಕಿಸದೆ ಕಾರ್ಮಿಕ ವಿರೋಧಿಯಾಗಿ ಬೀಡಿ ಕಾರ್ಮಿಕರ ವ್ಯತ್ಯಸ್ಥ ತುಟ್ಟಿಭತ್ತೆ(ವಿಡಿಎ) ಯನ್ನು ಒಂದು ವರ್ಷಗಳ ಕಾಲ ಮುಂದೂಡಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ.

ಇಂದು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಸಿಐಟಿಯು, ಎಐಟಿಯುಸಿ, ಎಚ್‌ಎಂಎಸ್ ಮತ್ತು ಬಿಎಂಎಸ್ ನ ಬೀಡಿ ಕಾರ್ಮಿಕ ಮುಖಂಡರು ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಬೀಡಿ ಕಾರ್ಮಿಕರಿಗೆ ತುಟ್ಟಿಭತ್ತೆ ವಿತರಿಸಲು ಒಪ್ಪಿಗೆ ನೀಡಿರುವ ಬೀಡಿ ಮಾಲಕರನ್ನು ಅಭಿನಂದಿಸಲಾಯಿತು.

ಕರ್ನಾಟಕ ರಾಜ್ಯ ಸರಕಾರವು ಕೈಗಾರಿಕಾ ಘಟಕಗಳು ಎಪ್ರಿಲ್ 1ರಿಂದ 2021 ಮಾರ್ಚ್ 31ರವರೆಗೆ ವ್ಯತ್ಯಸ್ಥ ತುಟ್ಟಿಭತ್ತೆ (ವಿಡಿಎ)ವಿತರಿಸುವ, ಮುಂದೂಡುವ ಆದೇಶ ಹೊರಡಿಸಿದೆ. ಈ ನಡುವೆಯೂ ಈ ವರ್ಷದ ಎಪ್ರಿಲ್ 1ರಿಂದ ಬೆಲೆ ಏರಿಕೆ ಪಾಯಿಂಟ್ 348 ಆಧಾರವಾಗಿ ನೀಡುವ ರೂಪಾಯಿ 13.92ನ್ನು ಬೀಡಿ ಕಾರ್ಮಿಕರಿಗೆ ವಿತರಿಸಲು ಕಾರ್ಮಿಕ ಸಂಘಟನೆಗಳ ವಿನಂತಿಯ ಮೇರೆಗೆ ಗಣೇಶ್ ಬೀಡಿ, ಭಾರತ್ ಬೀಡಿ ಮಾಲಕರು ಈ ವ್ಯತ್ಯಸ್ಥ ತುಟ್ಟಿಭತ್ತೆ(ವಿಡಿಎ)ಯನ್ನು ಜುಲೈ 1ರಿಂದ ಜಾರಿಗೊಳಿಸಲು ತೀರ್ಮಾನಿಸಿವೆ. ಉಳಿದ ಬೀಡಿ ಮಾಲಕರು ಕೂಡಾ ತುಟ್ಟಿಭತ್ತೆಯನ್ನು ಜಾರಿಗೊಳಿಸಲು ಸಹಮತ ವ್ಯಕ್ತಪಡಿಸಿದ್ದಾರೆ. ಎಪ್ರಿಲ್ 1ರಿಂದ ಜೂನ್ 30ರವರೆಗಿನ ಉಳಿಕೆ ವಿಡಿಎಯನ್ನು ಮುಂದಿನ ದಿನಗಳಲ್ಲಿ ವಿತರಿಸಲಾಗುವುದೆಂದು ಕಾರ್ಮಿಕ ಸಂಘಟನೆಗಳಿಗೆ ತಿಳಿಸಿದ್ದಾರೆ ಎಂದು ಕಾರ್ಮಿಕ ಮುಖಂಡರು ಈ ಸಂದರ್ಭ ವಿವರಿಸಿದರು.

ಕೈಗಾರಿಕಾ ವಿವಾದ ಕಾಯ್ದೆಗೆ ತಿದ್ದುಪಡಿ ಮಾಡಿ 100 ಕಾರ್ಮಿಕರು ಇರುವಲ್ಲಿನ ಕೈಗಾರಿಕಾ ಘಟಕಗಳು ಕಾರ್ಮಿಕರ ಮೇಲೆ ಕ್ರಮ ಕೈಗೊಳ್ಳುವ ಲೇಆಫ್, ರಿಟ್ರೆಚ್‌ಮೆಂಟ್, ಸಂಸ್ಥೆಯ ಮುಚ್ಚುಗಡೆ ಇತ್ಯಾದಿಗಳಿಗೆ ಸರಕಾರದ ಪರವಾನಿಗೆ ಬೇಕಾಗಿದ್ದು, ಅದನ್ನು 300 ಕಾರ್ಮಿಕರು ತನಕ ಸರಕಾರದ ಪರವಾನಿಗೆ ಅಗತ್ಯವಿಲ್ಲ ಎನ್ನುವ ತಿದ್ದುಪಡಿ, ಕೆಲಸದ ಅವಧಿಯನ್ನು 8 ಗಂಟೆಗೆ ಬದಲಾಗಿ 10 ಗಂಟೆಗೆ ತಿದ್ದುಪಡಿ ಮಾಡಿರುವ ಸುಗ್ರೀವಾಜ್ಞೆಯನ್ನು ಹಿಂಪಡೆಯಬೇಕೆಂದು ಧರಣಿನಿರತರು ಒತ್ತಾಯಿಸಿದರು.

ಧರಣಿಯನ್ನು ಉದ್ದೇಶಿಸಿ ಸಿಐಟಿಯು ಮುಂದಾಳುಗಳಾದ ವಸಂತ ಆಚಾರಿ, ಜೆ.ಬಾಲಕೃಷ್ಣ ಶೆಟ್ಟಿ, ಎಚ್‌ಎಂಎಸ್‌ನ ಮುಂದಾಳು ಮುಹಮ್ಮದ್ ರಫಿ, ಎಐಟಿಯುಸಿ ಮುಂದಾಳು ಸೀತಾರಾಮ ಬೇರಿಂಜೆ ಮಾತನಾಡಿದರು.

ಸಿಐಟಿಯುನ ಮುಂದಾಳುಗಳಾದ ಯು.ಜಯಂತ ನಾಯ್ಕಿ, ಸದಾಶಿವ ದಾಸ್, ಜಯಂತಿ ಬಿ. ಶೆಟ್ಟಿ, ರಾಮಣ್ಣ ವಿಟ್ಲ, ಭಾರತಿ ಬೋಳಾರ, ರಾಧಾ, ಗಿರಿಜಾ, ಎಐಟಿಯುಸಿಯ ಮುಂದಾಳುಗಳಾದ ಎಚ್.ವಿ.ರಾವ್, ವಿ.ಕುಕ್ಯಾನ್, ಕರುಣಾಕರ್, ಸುರೇಶ್, ಸರಸ್ವತಿ ಕಡೇಶಿವಾಲಯ, ಎಚ್‌ಎಂಎಸ್‌ನ ಮುಂದಾಳು ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು.

ಪ್ರತಿಭಟನಾ ಪ್ರದರ್ಶನದ ನಂತರ ವ್ಯತ್ಯಸ್ಥ ತುಟ್ಟಿಭತ್ತೆ ಮುಂದೂಡಿರುವ ಆದೇಶ ಪತ್ರದ ನಕಲನ್ನು ಸುಡಲಾಯಿತು. ತರುವಾಯ ಸಹಾಯಕ ಕಾರ್ಮಿಕ ಆಯುಕ್ತರು ಮತ್ತು ಕಾರ್ಮಿಕ ಅಧಿಕಾರಿಗಳಿಗೆ ಮನವಿಯನ್ನು ಅರ್ಪಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News