ಹೆಜಮಾಡಿ ಕಡಲ ಕಿನಾರೆಯಲ್ಲಿ ಸ್ವಚ್ಛತಾ ಶ್ರಮದಾನ

Update: 2020-07-30 12:40 GMT

ಉಡುಪಿ, ಜು.30: ಜಿಲ್ಲೆಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜಿಪಂ ಹಮ್ಮಿ ಕೊಂಡಿರುವ ಕಾರ್ಯಕ್ರಮಗಳು ಶ್ಲಾಘನೀಯ. ಗ್ರಾಪಂಗಳಲ್ಲಿ ಎಸ್. ಎಲ್. ಆರ್.ಎಂ. ಘಟಕಗಳನ್ನು ಪ್ರಾರಂಭಿಸಿ ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದ್ದಾರೆ.

ಉಡುಪಿ ಜಿಪಂನ ಸ್ವಚ್ಚ ಭಾರತ್ ಮಿಷನ್(ಗ್ರಾ) ಮತ್ತು ಹೆಜಮಾಡಿ ಗ್ರಾಮ ಪಂಚಾಯತ್ ಇವರ ಸಹಯೋಗದಲ್ಲಿ ಬುಧವಾರ ಹೆಜಮಾಡಿ ಕಡಲ ಕಿನಾರೆಯಲ್ಲಿ ಹಮ್ಮಿಕೊಂಡ ಸ್ವಚ್ಚತಾ ಶ್ರಮದಾನ- ಬೀಚ್ ಕ್ಲೀನಿಂಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಈ ನಿಟ್ಟಿನಲ್ಲಿ ಹೆಜಮಾಡಿ ಗ್ರಾಪಂ ಘಟಕದ ಸ್ವಚ್ಛತಾ ಸಿಬ್ಬಂದಿಗಳ ಸ್ವಚ್ಛತಾ ಕಾರ್ಯಕ್ರಮವನ್ನು ಪ್ರಶಂಸಿಸಿದರು.

ಉಡುಪಿ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್ ಮಾತನಾಡಿ, ಹೆಜಮಾಡಿ ಗ್ರಾಮದ ರೀತಿಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಲ್ಲಿ ಗ್ರಾಮಗಳ ಸ್ವಚ್ಛತೆ ಕಾಪಾಡಲು ಸಹಾಯಕವಾಗುವುದು ಹಾಗೂ ಸ್ವಚ್ಛ ಭಾರತದ ಕನಸು ನನಸಾಗಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಹೆಜಮಾಡಿ ರಸ್ತೆ ಸುಂಕ ವಸೂಲಾತಿ ಕೇಂದ್ರದ ಸಮೀಪ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನೈರ್ಮಲ್ಯ ಸಾರುವ ಫಲಕಗಳನ್ನು ಅನಾವರಣಗೊಳಿಸಲಾಯಿತು. ಸುಮಾರು 80 ಮಂದಿ ಸ್ಥಳೀಯ ಯುವಕ ಯುವತಿಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಹೆಜಮಾಡಿ ಎಸ್‌ಎಲ್‌ಆರ್‌ಎಂ ಕೇಂದ್ರದ ಕಾರ್ಯಕರ್ತರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಅಮವಾಸ್ಯೆ ಕರಿಯ ಕಡಲ ಕಿನಾರೆಯಲ್ಲಿ ಸ್ವಚ್ಚಾ ಶ್ರಮದಾನದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಹೆಜಮಾಡಿ ಗ್ರಾಪಂ ಆಡಳಿತಾಧಿಕಾರಿ ವೀಣಾ ಬಲ್ಲಾಳ್, ತಾಪಂ ಸದಸ್ಯೆ ನೀತಾ ಗುರುರಾಜ್, ಹೆಜಮಾಡಿ ಪಿಡಿಓ ಉಪಸ್ಥಿತರಿದ್ದರು. ಗಾಂಧಿನಗರ ಯುವಕ ಯುವತಿ ವೃಂದ, ಕರಾವಳಿ ಯುವಕ ವೃಂದ, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಕರಾವಳಿ ಯುವಕ ವೃಂದದ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News