ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ: ಹಸಿರೀಕರಣಕ್ಕೆ ಶಾಸಕರಿಂದ 17 ಲ.ರೂ. ಬಹುಮಾನ ಘೋಷಣೆ

Update: 2020-07-30 15:35 GMT

ಸುರತ್ಕಲ್,ಜು.30: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಐದು ಸಸಿ ನೆಟ್ಟು ಬೆಳೆಸಿದ ಪಕ್ಷದ ಬೂತ್‌ಗೆ ಶಾಸಕ ಡಾ.ಭರತ್ ಶೆಟ್ಟಿ ವೈ. ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ತಲಾ 10, 5 ಮತ್ತು 2 ಲಕ್ಷ ರೂ.ಬಹುಮಾನ ಘೋಷಿಸಿದ್ದಾರೆ.

ವಿಶ್ವ ಪರಿಸರ ದಿನಾಚರಣೆಯನ್ನು ಕೇವಲ ಕಾಟಾಚಾರಕ್ಕೆ ನಡೆಸದೆ ಇದರ ಪ್ರಯೋಜನ ಪ್ರಕೃತಿಗೆ ಆಗಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ಪ್ರತಿ ಬೂತ್ ನಲ್ಲಿ ಕನಿಷ್ಠ ಐದು ಗಿಡ ನೆಟ್ಟು ಬೆಳೆಸುವ ಗುರಿಯನ್ನು ಶಾಸಕರು ನಿಗದಿ ಪಡಿಸಿದ್ದು, ಪ್ರತಿ ಬೂತ್‌ನಲ್ಲಿ ನೆಟ್ಟ ಗಿಡಗಳನ್ನು ವಾರ್ಷಿಕವಾಗಿ ಮೌಲ್ಯ ಮಾಪನ ಮಾಡಿ, ಗಿಡಗಳನ್ನು ಅತ್ಯುತ್ತಮವಾಗಿ ಪೋಷಣೆ ಮಾಡಿದ ಬೂತ್‌ಗೆ ಪ್ರಥಮ ಬಹುಮಾನವಾಗಿ 10 ಲಕ್ಷ ರೂ., ಎರಡನೇ ಸ್ಥಾನ ಪಡೆಯುವ ಬೂತ್‌ಗೆ 5 ಲಕ್ಷ ರೂ., ಮೂರನೇ ಸ್ಥಾನ ಪಡೆಯುವ ಬೂತ್‌ಗೆ 2 ಲಕ್ಷ ರೂ.ಬಹುಮಾನ ಧನವನ್ನು ಶಾಸಕ ನಿಧಿಯಿಂದ ನೀಡಿ ಹೆಚ್ಚುವರಿಯಾಗಿ ಆ ಪ್ರದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ನಿರ್ಧರಿಸಿದ್ದಾರೆ. ಈ ಬಹುಮಾನದ ಹಣವನ್ನು ಆಯಾ ಬೂತ್‌ನ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುವ ಅವಕಾಶ ನೀಡಲಾಗುವುದು. ಈ ಮೂಲಕ ಪ್ರತೀ ಬೂತ್‌ನಲ್ಲಿ ಹಸಿರೀಕರಣ ಯೋಜನೆ ಪ್ರಯೋಜನಕಾರಿಯಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ಶಾಸಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರತೀ ಬಾರಿ ವನಮಹೋತ್ಸವ,ವಿಶ್ವ ಪರಿಸರ ದಿನಾಚರಣೆ ಮಾಡುತ್ತೇವೆ. ಅದರ ಪ್ರಯೋಜನ ಎಷ್ಟು ಎಂಬುದು ಹೇಳುವುದು ಕಷ್ಟ. ಅದಕ್ಕಾಗಿ ಈ ಬಾರಿ ವಿಶೇಷ ಗುರಿಯೊಂದನ್ನು ನನ್ನ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರಿಗೆ ನೀಡಿದ್ದೇನೆ. ಗರಿಷ್ಠ ಎಷ್ಟು ಆದರೂ ಆಗಬಹುದು, ಕನಿಷ್ಠ 5 ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಬೇಕು. ಇದನ್ನು ನಾನೇ ಮೌಲ್ಯಮಾಪನ ಮಾಡುತ್ತೇನೆ. ಅರ್ಹವಾದ ಬೂತ್‌ಗೆ ಬಹುಮಾನವಾಗಿ ಶಾಸಕ ನಿಧಿಯಿಯಿಂದ ನೀಡುತ್ತೇನೆ. 10, 5 ಮತ್ತು 2 ಲಕ್ಷ ರೂ. ಬಹುಮಾನ ಘೋಷಿಸಿದ್ದೇನೆ. ಇದರಿಂದ ಕಾರ್ಯಕರ್ತರಲ್ಲಿ ಸ್ಪರ್ಧಾತ್ಮಕ ದೃಷ್ಟಿಕೋನ ಬೆಳೆಯುತ್ತದೆ.

- ಡಾ.ಭರತ್ ಶೆಟ್ಟಿ ವೈ. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News