ರಿಕ್ಷಾ ಚಾಲಕರಿಗೆ ಸಿಗದ ಪರಿಹಾರ ಧನ: 'ಎಲ್ಲಿ 5 ಸಾವಿರ ರೂ.' ಘೋಷವಾಕ್ಯದೊಂದಿಗೆ ಆ.19ರಂದು ಪ್ರತಿಭಟನೆ

Update: 2020-08-17 13:13 GMT

ಬೆಂಗಳೂರು, ಆ. 17: ಕೋರೋನ ಸೋಂಕು ತಡೆಗಟ್ಟಲು ಹೇರಿದ್ದ ಲಾಕ್‍ಡೌನ್ ಸಮಯದಲ್ಲಿ ದುಡಿಮೆ ಇಲ್ಲದೆ ಕಂಗೆಟ್ಟ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಘೋಷಿಸಿದ್ದ 5 ಸಾವಿರ ರೂ.ಪರಿಹಾರ ನೀಡದೆ ವಂಚಿಸಿದ್ದು, ಇದನ್ನು ಖಂಡಿಸಿ 'ಆಪ್'ನಿಂದ 'ಎಲ್ಲಿ 5 ಸಾವಿರ ರೂ.' ಎನ್ನುವ ಘೋಷವಾಕ್ಯದೊಂದಿಗೆ ಆ.19ರಂದು ನಗರದ ಮೌರ್ಯ ವೃತ್ತದ, ಗಾಂಧಿ ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಕ್ಷ ರಾಜ್ಯ ಆಟೋ ಘಟಕದ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದ್ದಾರೆ.

ಸೋಮವಾರ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ರಿಕ್ಷಾ, ಟ್ಯಾಕ್ಸಿ ಚಾಲಕರ ನೆರವಿಗೆ ಧಾವಿಸುವ ಭರವಸೆ ನೀಡಿದ್ದ ಸರಕಾರ ಇದೀಗ ಅರ್ಜಿ ಸಲ್ಲಿಸಿದವರಿಗೆ ಪರಿಹಾರವನ್ನು ನೀಡುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರ ಕೇವಲ ಘೋಷಣೆಗೆ ಸೀಮಿತವಾಗಿದೆ. ಆದುದರಿಂದ ಚಾಲಕರು ಅನಿವಾರ್ಯವಾಗಿ ಬೀದಿಗೆ ಇಳಿಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ 7 ಲಕ್ಷಕ್ಕೂ ಅಧಿಕ ಆಟೊ ಚಾಲಕರಿದ್ದಾರೆ. ಇವರಲ್ಲಿ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿದವರು ಕೇವಲ 3.5 ಲಕ್ಷ ಆಟೋಗಳು ನೋಂದಾಯಿಸಿಕೊಂಡಿದ್ದಾರೆ. ಆದರೆ, ಸರಕಾರ ಕೇವಲ 40 ಸಾವಿರ ಮಂದಿಗೆ ಪರಿಹಾ ನೀಡಿ ಉಳಿದವರಿಗೆ ಪರಿಹಾರ ನೀಡದೆ ವಂಚಿಸಿದೆ ಎಂದು ಆದರ್ಶ ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸಂಪತ್ ಆರೋಪಿಸಿದರು.

ಆಮ್ ಆದ್ಮಿ ಪಕ್ಷದ ಈ ಪ್ರತಿಭಟನೆಗೆ ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ,  ರಾಜೀವ್ ಗಾಂಧಿ ಆಟೋ ಚಾಲಕರ ವೇದಿಕೆ, ಆದರ್ಶ ಆಟೋ ಯೂನಿಯನ್, ವಿಜಯ ಕರ್ನಾಟಕ ಆಟೋ ಘಟಕ, ರಕ್ಷಣಾ ವೇದಿಕೆ ಆಟೋ ಘಟಕ, ಜಯ ಕರ್ನಾಟಕ ಆಟೋ ಸಂಘಟನೆ ಸೇರಿದಂತೆ 20 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಘೋಷಿಸಿದೆ ಎಂದು ಆಮ್ ಆದ್ಮಿ ಪಕ್ಷದ ರಾಜಕೀಯ ಉಸ್ತುವಾರಿ ಲಕ್ಷ್ಮೀಕಾಂತ್ ರಾವ್ ತಿಳಿಸಿದರು. ಗೋಷ್ಠಿಯಲ್ಲಿ ಆಟೋ ಘಟಕದ ಉಪಾಧ್ಯಕ್ಷ ವೆಂಕಟೇಗೌಡ, ಝಹೀರ್ ಅಬ್ಬಾಸ್, ಕಾರ್ಯದರ್ಶಿ ಸಯ್ಯದ್ ಅತೀಕ್ ಅಹಮದ್, ಮುಖಂಡ ವಿನ್ಸೆಂಟ್ ಪ್ರಭಾಕರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News