ಕಾವಲ್ ಭೈರಸಂದ್ರ ಗಲಾಟೆ ಪ್ರಕರಣ: ಆರೆಸ್ಸೆಸ್ಸ್ ಕಾರ್ಯಕರ್ತ ರುದ್ರೇಶ್ ಕೊಲೆ ಆರೋಪಿ ಪೊಲೀಸ್ ವಶಕ್ಕೆ

Update: 2020-08-17 16:46 GMT

ಬೆಂಗಳೂರು, ಆ.17: ಕಾವಲ್ ಭೈರಸಂದ್ರ ಗಲಾಟೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಅಧಿಕಗೊಳ್ಳುತ್ತಿದ್ದು, ಮತ್ತೊಂದೆಡೆ 2016ರ ಶಿವಾಜಿನಗರದ ಕಾಮರಾಜ ರಸ್ತೆ ಬಳಿ ನಡೆದ ಆರೆಸ್ಸೆಸ್ಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ಕೂಡ ತಳಕು ಹಾಕಿಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯ ಎಟಿಸಿ ಎಸಿಪಿ ವೇಣುಗೋಪಲ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಸಮೀಯುದ್ದೀನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಈತ ರುದ್ದೇಶ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ.

ಕೊಲೆ ಪ್ರಕರಣದಲ್ಲಿ ಮುಹಮ್ಮದ್ ಸಾದಿಕ್, ಮುಝಿವುಲ್ಲಾ, ವಸೀಮ್ ಅಹ್ಮದ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ಸಮೀಯುದ್ದೀನ್ ಎಂಬಾತನ ಹೆಸರು ಸಹ ತಳಕು ಹಾಕಿಕೊಂಡಿತ್ತು. ನಂತರ ಸಮೀಯುದ್ದೀನ್ ಜಾಮೀನು ಪಡೆದು ಹೊರಬಂದಿದ್ದ. ಆದರೆ, ಕೆಲ ಸಂಘಟನೆಗಳು ಹಮ್ಮಿಕೊಳ್ಳುತ್ತಿದ್ದ ಕಾರ್ಯಕ್ರಮದ ಸ್ಥಳಕ್ಕೆ ತೆರಳಿ ಹಲವರ ಮೇಲೆ ಹಲ್ಲೆ ಮಾಡಲು ಪ್ರಯತ್ನಪಟ್ಟಿರುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಅಷ್ಟೇ ಅಲ್ಲದೆ, ಈತ ಅಲ್-ಹಿಂದ್ ಸಂಘಟನೆಯ ಸದಸ್ಯರೊಂದಿಗೆ ಸಂಪರ್ಕ ಹೊಂದಿದ್ದ ಎನ್ನುವ ಮಾಹಿತಿ ಇದ್ದು, ಸದ್ಯ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಮತ್ತೋರ್ವ ಸೆರೆ

ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಜೀದ್ ಎಂಬಾತನನ್ನು ಇಲ್ಲಿನ ಡಿಜೆಹಳ್ಳಿ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಈತ ನವೀನ್ ಹಾಕಿದ ಸಾಮಾಜಿಕ ಜಾಲತಾಣದ ಪೋಸ್ಟ್ ಸಂಬಂಧ ಡಿ.ಜೆ ಹಳ್ಳಿ ಠಾಣೆಗೆ ದೂರು ನೀಡಲು ಬಂದಿದ್ದ. ಈ ವೇಳೆ, ಠಾಣಾಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದ ಎಂದು ತಿಳಿದುಬಂದಿದೆ.

ಬಂಧಿತ ವಾಜೀದ್ ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷನಾಗಿದ್ದು, ಜೆಡಿಎಸ್‍ನಲ್ಲೂ ಕೂಡ ಗುರುತಿಸಿಕೊಂಡಿದ್ದ. ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಹಾಕಿದ್ದ ಹಿನ್ನೆಲೆ ಶ್ರೀನಿವಾಸಮೂರ್ತಿ ಬೆಂಬಲಿಗರು ಈತನ ವಿರುದ್ಧ ದೂರು ನೀಡಿದ್ದರು ಎನ್ನಲಾಗಿದೆ.

ಗಲಾಟೆ ಪ್ರಕರಣ ಸಂಬಂಧ ಪ್ರತಿದಿನ ದಾಖಲಾಗುತ್ತಿರುವ ಎಫ್‍ಐಆರ್ ಗಳ ಸಂಖ್ಯೆ ಏರಿಕೆ ಆಗುತ್ತಿದ್ದು, ಸದ್ಯ ಘಟನೆ ಹಿನ್ನೆಲೆ ಸುಮಾರು 65 ಎಫ್‍ಐಆರ್ ಗಳು ದಾಖಲಾಗಿವೆ.

ಈ ಘಟನೆಯಿಂದ ತಮ್ಮ ಆಸ್ತಿ, ಮನೆ, ವಾಹನಗಳನ್ನು ಕಳೆದುಕೊಂಡ ಸ್ಧಳೀಯರು ಪೊಲೀಸರ ಮೊರೆ ಹೊಗುತ್ತಿದ್ದಾರೆ. ತಮ್ಮ ವಸ್ತುಗಳನ್ನು ಪಟ್ಟಿ ಮಾಡಿಕೊಂಡು ಬಂದು ಪ್ರಕರಣ ದಾಖಲಿಸುತ್ತಿದ್ದಾರೆ. ಪ್ರಸ್ತುತ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ 49 ಎಫ್‍ಐಆರ್ ದಾಖಲಾದರೆ, ಕೆ.ಜಿ ಹಳ್ಳಿ ಠಾಣೆಯಲ್ಲಿ 16 ಎಫ್‍ಐಆರ್ ದಾಖಲಾಗಿದೆ.

ನವೀನ್ ವಿರುದ್ಧ ದೂರು ಕೊಟ್ಟವರ ಬೈಕ್‍ಗೆ ಬೆಂಕಿ

ಅವಹೇಳನಕಾರಿ ಪೋಸ್ಟ್ ಹರಿಬಿಟ್ಟ ಆರೋಪದಡಿ ಬಂಧಿತನವಾಗಿರುವ ನವೀನ್ ವಿರುದ್ಧ ದೂರು ನೀಡಲು ಠಾಣೆಗೆ ಬಂದಿದ್ದ ಪಿ.ಪಾಷಾ ಎಂಬುವರ ಬೈಕ್ ಅನ್ನು ಸಹ ದುಷ್ಕರ್ಮಿಗಳಿಗೆ ಬೆಂಕಿ ಹಚ್ಚಿರುವ ಘಟನೆ ಬೆಳಕಿಗೆ ಬಂದಿದೆ.

ಗಲಾಟೆಯಲ್ಲಿ ತಮ್ಮ ಬೈಕ್‍ಗೂ ಸಹ ಹಾನಿಯಾಗಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮ ಜರುಗಿಸುವಂತೆ ಪಿ.ಪಾಷಾ ಸೋಮವಾರ ಇಲ್ಲಿನ ಡಿಜೆಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿದರು.

ಗಲಾಟೆ ಮಾಡಲು ಬಂದವರು ನನ್ನ ಬೈಕ್ ಸಹ ಸುಟ್ಟು ಹಾಕಿದ್ದಾರೆ. ಪೊಲೀಸರು ಅಮಾಯಕರನ್ನು ಬಿಟ್ಟು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಪಿ.ಪಾಷಾ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News