ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು: ಮೂವರು ಮಂಗಳಮುಖಿಯರ ಬಂಧನ

Update: 2020-08-17 17:29 GMT

ಬೆಂಗಳೂರು, ಆ.17: ಮಂಗಳಮುಖಿಯರಂತೆ ವೇಷತೊಟ್ಟು ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ಕೊಲೆ ಪ್ರಕರಣವನ್ನು ಬೇಧಿಸಿರುವ ಇಲ್ಲಿನ ಎಲೆಕ್ಟ್ರಾನಿಕ್ ಠಾಣಾ ಪೊಲೀಸರು, ಮೂವರು ಮಂಗಳಮುಖಿಯರನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ದೇವಿ, ಭಾವನಾ ಹಾಗೂ ನಿತ್ಯ ಎಂದು ಗುರುತಿಸಲಾಗಿದ್ದು, ಕೊಲೆಯಾದ ವ್ಯಕ್ತಿ ರಾಮನಗರ ಮೂಲದ ರಾಜೇಂದ್ರ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜೇಂದ್ರ ಬೆಳಗ್ಗಿನ ಜಾವದಲ್ಲಿ ಗಾಮೆರ್ಂಟ್ಸ್ ಉದ್ಯೋಗಿಯಾಗಿ ಕೆಲಸ ಮಾಡಿಕೊಂಡು ಸಂಜೆ ವೇಳೆ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಮಂಗಳಮುಖಿ ವೇಷ ತೊಟ್ಟು ಓಡಾಡುವ ವಾಹನಗಳ ಬಳಿ ಹೋಗಿ ಭಿಕ್ಷೆ ಬೇಡಿ ಹಣ ಸಂಗ್ರಹಿಸುತ್ತಿದ್ದ ಎನ್ನಲಾಗಿದೆ.

ಈ ಸಂದರ್ಭದಲ್ಲಿ ರಾಜೇಂದ್ರನನ್ನು ಗಮನಿಸಿದ ಮಂಗಳಮುಖಿಯರು, ಆತನನ್ನು ಹಿಡಿದು ಹಲ್ಲೆ ನಡೆಸಿದ್ದರು. ಇದರಿಂದ ತೀವ್ರ ಗಾಯಗೊಂಡಿದ್ದ ರಾಜೇಂದ್ರ ಸಾವನ್ನಪ್ಪಿದ್ದು, ಬಳಿಕ ಆರೋಪಿಗಳು ರಾಜೇಂದ್ರನ ಮೃತದೇಹವನ್ನು ರಾಮನಗರ ಆಸ್ಪತ್ರೆಗೆ ಕೊಂಡೊಯ್ದು ಅನಾಥ ಶವ ಎಂದು ಬಿಂಬಿಸಿದ್ದರು. 

ಆಗ ಆಸ್ಪತ್ರೆ ಸಿಬ್ಬಂದಿಗೆ ಅನುಮಾನ ಬಂದು ರಾಮನಗರ ಪೊಲೀಸರಿಗೆ ಮಾಹಿತಿ ತಿಳಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಕಾರ್ಯ ಪ್ರವೃತ್ತರಾದ ರಾಮನಗರ ಪೊಲೀಸರು ಕೊಲೆ ನಡೆದಿರುವ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೋಲಿಸರಿಗೆ ಸಂಪೂರ್ಣ ಮಾಹಿತಿ ನೀಡಿದಾಗ, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News