ಉಡುಪಿ ಜಿಲ್ಲೆಯಲ್ಲಿ ಕೊರೋನ ಎಫೆಕ್ಟ್ : ಚೇತರಿಕೆ ಪ್ರಮಾಣ ಶೇ.68.28, ಸಾವು ಶೇ.0.95
ಉಡುಪಿ, ಆ.18: ಕಳೆದ ಮಾರ್ಚ್ 24ರಂದು ದುಬೈಯಿಂದ ಬಂದ ಮಣಿಪಾಲದ 34ರ ಹರೆಯದ ತರುಣನಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗುವುದರೊಂದಿಗೆ ಉಡುಪಿ ಜಿಲ್ಲೆಗೆ ಕಾಲಿಟ್ಟ ಕೋವಿಡ್-19 ಎಂಬ ವಿಶ್ವವನ್ನೇ ಅಲ್ಲೋಲಕಲ್ಲೋಲಗೊಳಿಸಿದ ಮಹಾಮಾರಿಗೆ ಕಳೆದ ಆರು ತಿಂಗಳಲ್ಲಿ ಒಟ್ಟು 8,245 ಮಂದಿ ಜಿಲ್ಲೆಯಲ್ಲಿ ಸೋಂಕಿತರಾಗಿದ್ದಾರೆ.
ಆರಂಭದಲ್ಲಿ ತೀರಾ ನಿಧಾನಗತಿಯಲ್ಲಿದ್ದು ಅಲ್ಲೊಂದು, ಇಲ್ಲೊಂದು ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಳ್ಳುತಿದ್ದರೆ, ಲಾಕ್‌ಡೌನ್ ಮುಗಿದು ಮುಂಬೈ ಹಾಗೂ ಹೊರರಾಜ್ಯಗಳಿಂದ ಜನರು ಜಿಲ್ಲೆಗೆ ಬರಲು ಅವಕಾಶದ ಬಾಗಿಲು ತೆರೆಯುತಿದ್ದಂತೆ ವೇಗವಾಗಿ ಗ್ರಾಮದ ಮೂಲೆಮೂಲೆಗೂ ಹರಡಿ ಇದೀಗ ಸಮುದಾಯದ ಮಧ್ಯೆ ವ್ಯಾಪಕವಾಗಿ ಪಸರಿಸಿರುವುದನ್ನು ಯಾರೂ ಅಲ್ಲಗೆಳೆಯದ ಸ್ಥಿತಿಗೆ ಬಂದು ನಿಂತಿದೆ.
ಕಳೆದ ಆರು ತಿಂಗಳಲ್ಲಿ ಆ.17ರ ಸೋಮವಾರದವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 8,245 ಮಂದಿಯಲ್ಲಿ ಕೊರೋನ ಪಾಸಿಟಿವ್ ಕಂಡು ಬಂದಿದೆ. ಇವರಲ್ಲಿ 4,868 (ಶೇ.59) ಮಂದಿ ಮಕ್ಕಳು ಸೇರಿದಂತೆ ಪುರುಷರಾದರೆ, ಉಳಿದ 3,375 (ಶೇ.41) ಮಂದಿ ಮಹಿಳೆಯರಾಗಿದ್ದಾರೆ. ಇವರಲ್ಲಿ ಶೇ.7ರಷ್ಟು ಅಂದರೆ 549 ಮಂದಿ (274 ಬಾಲಕರು, 275 ಬಾಲಕಿಯರು) 10 ವರ್ಷದೊಳಗಿನ ಮಕ್ಕಳಾದರೆ, ಶೇ.80ರಷ್ಟು ಸಿಂಹಪಾಲು ಅಂದರೆ 6,617 ಮಂದಿ (3,982 ಪುರುಷರು, 2,635 ಮಹಿಳೆಯರು) 11ರಿಂದ 60ವರ್ಷದೊಳಗಿವರು. ಉಳಿದ ಶೇ.13ರಷ್ಟು ಅಂದರೆ 1,077 ಮಂದಿ (612-465) 60ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಾಗಿದ್ದಾರೆ.
ಮರಣ ಪ್ರಮಾಣ ಕಡಿಮೆ
ಉಡುಪಿ ಜಿಲ್ಲೆಯಲ್ಲಿ ಆರಂಭದಿಂದಲೂ ಕೊರೋನ ಸೋಂಕಿನ ಪರೀಕ್ಷೆ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವುದರಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆಯೂ ಅಧಿಕವಾಗಿದೆ. ಆದರೆ ಉಳಿದ ಜಿಲ್ಲೆಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಮರಣ ಪ್ರಮಾಣ ತೀರಾ ಕಡಿಮೆ ಎನ್ನಬಹುದು. ಆರೋಗ್ಯ ಇಲಾಖೆ ನೀಡುವ ಅಧಿಕೃತ ಮಾಹಿತಿಯಂತೆ ಜಿಲ್ಲೆಯಲ್ಲಿ ನಿನ್ನೆಯವರೆಗೆ ಕೇವಲ 78 ಮಂದಿ ಮಾತ್ರ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದು ಒಟ್ಟಾರೆಯಾಗಿ ಶೇ.0.95 ಆಗಿದ್ದು, ರಾಜ್ಯದಲ್ಲಿ ಅತಿ ಕಡಿಮೆ ಮರಣ ಪ್ರಮಾಣ ಹೊಂದಿರುವ ನಾಲ್ಕು ಜಿಲ್ಲೆಗಳಲ್ಲಿ ಉಡುಪಿ ಒಂದಾಗಿದೆ.
ಇದಕ್ಕೆ ಹೋಲಿಸಿದರೆ ರಾಜ್ಯದ ಸರಾಸರಿ ಮರಣ ಪ್ರಮಾಣ ಶೇ.1.72 ಆಗಿದ್ದರೆ, ಭಾರತದ ಮರಣ ಪ್ರಮಾಣ ಶೇ.1.92 ಆಗಿದೆ. ರಾಜ್ಯದಲ್ಲಿ ಕೇವಲ ಬೆಂಗಳೂರು ಗ್ರಾಮಾಂತರ (ಶೇ.0.5), ಯಾದಗಿರಿ (ಶೇ.0.6), ರಾಮನಗರ (ಶೇ.0.8) ಹಾಗೂ ಚಿತ್ರದುರ್ಗ (ಶೇ.0.9) ಉಡುಪಿ ಗಿಂತ ಕೆಳಗಿನ ಸ್ಥಾನದಲ್ಲಿರುವ ಜಿಲ್ಲೆಗಳಾಗಿವೆ.
ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟಿರುವ 78 ಮಂದಿಯಲ್ಲಿ ಒಬ್ಬ ಬಾಲಕರ ಮಾತ್ರ (ಶೇ.1) 10ವರ್ಷ ಪ್ರಾಯದೊಳಗಿದವನಾಗಿದ್ದರೆ, 30 ಮಂದಿ (23-7) 11ರಿಂದ 60ವರ್ಷದೊಳಗಿನವರು (ಶೇ.38) ಹಾಗೂ ಉಳಿದ 47 ಮಂದಿ (35-12) 60 ವರ್ಷ ಮೇಲಿನ ಹಿರಿಯ ನಾಗರಿಕರು (ಶೇ.61). ಮೃತಪಟ್ಟವರಲ್ಲಿ 38 ಮಂದಿ ಉಡುಪಿ ತಾಲೂಕಿನವರು, 29 ಮಂದಿ ಕುಂದಾಪುರ ತಾಲೂಕಿನವರು ಹಾಗೂ 11 ಮಂದಿ ಕಾರ್ಕಳ ತಾಲೂಕಿನವರಾಗಿದ್ದಾರೆ.
ಉಡುಪಿಗೆ ಸಿಂಹಪಾಲು
ಜಿಲ್ಲೆಯಲ್ಲಿ ಇದುವರೆಗೆ ಪಾಸಿಟಿವ್ ಬಂದವರಲ್ಲಿ ಉಡುಪಿ ತಾಲೂಕಿಗೆ ಸಿಂಹಪಾಲು. ಈ ತಾಲೂಕಿನ ಒಟ್ಟು 3,467 ಮಂದಿ (ಶೇ.43) ಪಾಸಿಟಿವ್ ಬಂದಿದ್ದರೆ, ಕುಂದಾಪುರ ತಾಲೂಕಿನ 3,257 (ಶ.41) ಹಾಗೂ ಕಾರ್ಕಳ ತಾಲೂಕಿನ 1,213 (ಶೇ.11)ರಷ್ಟು ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಉಳಿದ 62 ಮಂದಿ ಹೊರಜಿಲ್ಲೆಯವರಾಗಿದ್ದು, ಜಿಲ್ಲೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿ ಪಾಸಿಟಿವ್ ಬಂದವರಾಗಿ ದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ಚೇತರಿಕೆ ಪ್ರಮಾಣ ಶೇ.68.28
ಪಾಸಿಟಿವ್ ಬಂದು ಚಿಕಿತ್ಸೆಯ ಬಳಿಕ ಚೇತರಿಸುವುದರಲ್ಲಿ ಜಿಲ್ಲೆಯ ನಿನ್ನೆಯವರೆಗಿನ ಸಾಧನೆ ಶೇ.68.28 ಆಗಿದೆ. ಪಾಸಿಟಿವ್ ಕಂಡುಬಂದ 8,245 ಮಂದಿಯಲ್ಲಿ ಈವರೆಗೆ 5,630 ಮಂದಿ (ಶೇ.68.28) ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲೀಗ 2,537 ಮಂದಿ ಸೋಂಕಿಗೆ ಸಕ್ರಿಯರಾಗಿದ್ದು (ಶೇ.30.77) ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ ಹೋಮ್ ಐಸೋಲೇಷನ್ ಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಚೇತರಿಕೆಯ ಪ್ರಮಾಣದಲ್ಲಿ ಕರ್ನಾಟಕದ ಸಾಧನೆ ಶೇ.63.7 ಆಗಿದೆ. ಆದರೆ ರಾಜ್ಯದಲ್ಲಿ ವಿಜಯಪುರ (ಶೇ.79), ಬೆಳಗಾವಿ(ಶೇ.78), ಚಿಕ್ಕಬಳ್ಳಾಪುರ (ಶೇ.78), ಕಲಬುರ್ಗಿ (ಶೇ.76), ಚಾಮರಾಜನಗರ (ಶೇ.72) ಈ ವಿಷಯದಲ್ಲಿ ಉತ್ತಮ ಸಾಧನೆ ಮಾಡಿವೆ.
ಜಿಲ್ಲೆಯಲ್ಲಿ ಇದುವರೆಗೆ ಪಾಸಿಟಿವ್ ಕಾಣಿಸಿಕೊಂಡ ಶೇ.33ರಷ್ಟು ಮಂದಿ ಯಲ್ಲಿ (2,726) ಮಾತ್ರ ಕೋವಿಡ್‌ನ ಗುಣಲಕ್ಷಣಗಳು ಕಂಡು ಬಂದಿದ್ದರೆ, ಶೇ. 67ರಷ್ಟು ಮಂದಿಯಲ್ಲಿ (5,519) ಯಾವುದೇ ಗುಣಲಕ್ಷಣ ಕಂಡುಬಂದಿಲ್ಲ. ಇದರಿಂದ 5,559 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಉಳಿದ 2,679 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಇಲಾಖೆಯ ಮಾಹಿತಿಗಳು ತಿಳಿಸಿವೆ.
ವಾರದಿಂದ ಏರುಗತಿ
ಆರಂಭದಲ್ಲಿ ತೀರಾ ನಿಧಾನಗತಿಯಲ್ಲಿದ್ದ ಕೊರೋನ ಹರಡುವಿಕೆ ಕಳೆದೊಂದು ತಿಂಗಳಿನಿಂದ ವೇಗ ಪಡೆದಿದ್ದು, ಒಂದು ವಾರದಿಂದ ಭಾರೀ ಏರುಗತಿಯಲ್ಲಿ ಸಾಗಿದೆ. ರಾಜ್ಯ ಆರೋಗ್ಯ ಇಲಾಖೆ ನೀಡಿದ ಮಾಹಿತಿ ಯಂತೆ ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ 1,733 ಪಾಸಿಟಿವ್ ಕೇಸು ಗಳು ವರದಿಯಾಗಿವೆ. ಬೆಂಗಳೂರು ನಗರ (14,826) ಬಿಟ್ಟರೆ, ಮೈಸೂರು (3,209) ಬಳ್ಳಾರಿ (3,147), ಬೆಳಗಾವಿ (1,943) ಜಿಲ್ಲೆಗಳಲ್ಲಿ ಮಾತ್ರ ಇದಕ್ಕಿಂತ ಹೆಚ್ಚಿನ ಪಾಸಿಟಿವ್ ಕೇಸು ಕಂಡುಬಂದಿದೆ.
ಜನರ ನಿರ್ಲಕ್ಷ್ಯ ಕಾರಣ
ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ ಹೆಚ್ಚಲು ಜನರು ರೋಗದ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯದ ಧೋರಣೆಯೇ ಕಾರಣ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ನುಡಿದರು. ಜಿಲ್ಲೆಯ ಜನರಿಗೆ ಕೋವಿಡ್-19ರ ಬಗ್ಗೆ ಸಂಪೂರ್ಣ ಅರಿವು ಹಾಗೂ ಮಾಹಿತಿ ಇದೆ. ಆದರೆ ಈ ಬಗ್ಗೆ ಸರಕಾರ ನೀಡಿರುವ ಎಚ್ಚರಿಕೆಯನ್ನು ಯಾರೂ ಪಾಲಿಸುತ್ತಿಲ್ಲ. ಮಾತ್ರವಲ್ಲ ಅದನ್ನು ಗಂಭೀರವಾಗಿ ತೆಗೆದು ಕೊಳ್ಳದೇ, ನಿರ್ಲಕ್ಷ್ಯ ತೋರುತ್ತಿರುವುದೇ ಎಲ್ಲಕ್ಕೂ ಕಾರಣವಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಕೊರೋನ ಎಂದರೆ ಮಾಮೂಲು ಶೀತ, ಜ್ವರ, ಕೆಮ್ಮು ಎಂದು ಅವರು ನಿರ್ಲಕ್ಷ್ಯ ವಹಿಸಿ ಪರೀಕ್ಷೆಗೆ ಬರುತ್ತಾ ಇಲ್ಲ. ಎಷ್ಟು ಅಂದರೆ ಅವರು ಈಗಲೂ ಸೀಲ್‌ಡೌನ್‌ಗೆ ಕಂಟೈನ್‌ಮೆಂಟ್ ವಲಯ ಮಾಡಿದರೂ ಅದನ್ನು ಗಂಭೀರವಾಗಿ ಪಾಲಿಸುತ್ತಿಲ್ಲ. ಪಾಸಿಟಿವ್ ಬಂದವರು ತಮ್ಮ ಪ್ರಾಥಮಿಕ ಸಂಪರ್ಕದ ಕುರಿತು ಸರಿಯಾದ ಮಾಹಿತಿ ನೀಡುತ್ತಿಲ್ಲ. ಇವೆಲ್ಲವುದರಿಂದ ರೋಗ, ಸಮುದಾಯದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಇದರ ಪರಿಣಾಮ ಸಮಾಜದ ಮೇಲಾಗುತ್ತಿದೆ ಎಂದು ಡಾ. ಸೂಡ ನುಡಿದರು.
‘ಪ್ರಾಥಮಿಕ ಸಂಪರ್ಕದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ’
ಜಿಲ್ಲೆಯಲ್ಲಿ ಪಾಸಿಟಿವ್ ಬಂದವರು ವೈದ್ಯರೊಂದಿಗೆ, ಆರೋಗ್ಯ ಇಲಾಖೆಯವರೊಂದಿಗೆ ಸರಿಯಾಗಿ ವರ್ತಿಸಬೇಕಾಗಿದೆ. ಅವರಿಗೆ ಸಂಪೂರ್ಣ ಮಾಹಿತಿ ನೀಡಬೇಕಾಗಿದೆ. ನೀವು ಎಲ್ಲಿ ಚಿಕಿತ್ಸೆ ಪಡೆಯುತ್ತೀರಿ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಇದಕ್ಕಿಂತ ಮುಖ್ಯ ಪಾಸಿಟಿವ್ ಬಂದ ವರು ತಮ್ಮ ಪ್ರಾಥಮಿಕ ಸಂಪರ್ಕದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿ ಪ್ರಾಥಮಿಕ ಸಂಪರ್ಕದ ಗುರುತಿಸುವಿಕೆ ಅತಿ ಮುಖ್ಯ. ಅವರನ್ನು ಸರಿಯಾಗಿ ಗುರುತಿಸದಿದ್ದರೆ, ಇವರಿಂದ ಸಮಾಜಕ್ಕೆ ಸೋಂಕು ಬೇಗ ಹಬ್ಬುತ್ತದೆ. ಇದಕ್ಕಾಗಿ ಅವರನ್ನು ಪರೀಕ್ಷಿಸಲು ಈ ಬಗ್ಗೆ ಮಾಹಿತಿ ಬೇಕು. ತಮ್ಮ ಪ್ರಾಥಮಿಕ ಸಂಪರ್ಕದ ಬಗ್ಗೆ ಸರಿಯಾದ ಮಾಹಿತಿ ನೀಡದೇ ಮುಚ್ಚಿಟ್ಟರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ.
-ಜಿ.ಜಗದೀಶ್, ಉಡುಪಿ ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ 144 ಐಸಿಯು, 29 ವೆಂಟಿಲೇಟರ್, 338 ಎಚ್‌ಡಿಯು
ಕೊರೋನ ಪಾಸಿಟಿವ್ ರೋಗಿಗಳ ಚಿಕಿತ್ಸೆಗೆ ಉಡುಪಿ ಜಿಲ್ಲೆಯ ಮೂರು ಸರಕಾರಿ ಆಸ್ಪತ್ರೆ ಹಾಗೂ ಆರು ಕೋವಿಡ್ ಕೇರ್ ಸೆಂಟರ್‌ಗಳಲ್ಲದೇ ಜಿಲ್ಲೆಯ 20 ಖಾಸಗಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ 26 ಐಸಿಯು, ಆರು ಎಚ್‌ಡಿಯು ಹಾಗೂ 29 ವೆಂಟಿಲೇಟರ್ ಗಳೊಂದಿಗೆ 694 ಸಾಮಾನ್ಯ ಬೆಡ್‌ಗಳಿವೆ.
ಅದೇ ರೀತಿ 20 ಖಾಸಗಿ ಆಸ್ಪತ್ರೆಗಳಲ್ಲಿ 118 ಐಸಿಯು, 338 ಎಚ್‌ಡಿಯು (ಹೈ ಡಿಫೆಂಡೆನ್ಸಿ ಯುನಿಟ್) ಹಾಗೂ 1400 ಜನರಲ್ ವಾರ್ಡ್ ಬೆಡ್ ಗಳು ಕೋವಿಡ್-19 ಪಾಸಿಟಿವ್ ಬಂದವರ ಚಿಕಿತ್ಸೆಗೆ ಲಭ್ಯವಿದೆ ಎಂದು ಡಿಎಚ್‌ಓ ಡಾ. ಸೂಡ ತಿಳಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸುಮಾರು 2,600 ಬೆಡ್‌ಗಳು ಇದಕ್ಕಾಗಿ ಮೀಸಲಿರಿಸಲಾಗಿದೆ ಎಂದವರು ನುಡಿದರು.
ರಾಜ್ಯದ ಆರೋಗ್ಯ ಇಲಾಖೆ ಪ್ರತಿದಿನದ ಬುಲೆಟಿನ್‌ನಲ್ಲಿ ನೀಡುತ್ತಿರುವ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಮಾಹಿತಿಯಂತೆ ಕಳೆದ ಮೂರು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಕೇವಲ ಐವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.