ಪ್ರಧಾನಿ ಕಾರ್ಯಾಲಯದಿಂದ ಕರ್ತವ್ಯಲೋಪ: ದ.ಕ. ಜಿಲ್ಲಾ ಕಾಂಗ್ರೆಸ್ ಆರೋಪ

Update: 2020-08-19 08:23 GMT

ಮಂಗಳೂರು, ಆ.19: ಕೋವಿಡ್‌ನ ಹಿನ್ನೆಲೆಯಲ್ಲಿ ಸಂಗ್ರಹಿಸಲಾದ ಪಿಎಂ ಕೇರ್ಸ್ ನಿಧಿಯನ್ನು ಯಾವ ರೀತಿಯಲ್ಲಿ ವಿನಿಯೋಗಿಸಲಾಗಿದೆ ಎಂಬ ಬಗ್ಗೆ ತಿಳಿಸುವಲ್ಲಿ ಹಿಂದೇಟು ಹಾಕಲಾಗುತ್ತಿದ್ದು, ಪ್ರಧಾನಿ ಕಾರ್ಯಾಲಯ ಕರ್ತವ್ಯ ಲೋಪ ಎಸಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ. 

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೋವಿಡ್ ಹೆಸರಿನಲ್ಲಿ ಆರಂಭಿಸಿದ ನಿಧಿಯಲ್ಲಿ ಕೋಟ್ಯಂತರ ಹಣ ಸಂಗ್ರಹವಾಗಿದೆ. ಅದನ್ನು ಕೋವಿಡ್ ನಿರ್ವಹಣೆಗೆ ಖರ್ಚು ಮಾಡಬೇಕು. ಆದರೆ ಅದನ್ನು ಬಿಜೆಪಿ ತನ್ನ ಪಕ್ಷದ ಖರ್ಚುವೆಚ್ಚಗಳಿಗೆ, ಚುನಾವಣಾ ವೆಚ್ಚಗಳಿಗೆ ಉಪಯೋಗಿಸುತ್ತಿರುವ ಗುಮಾನಿ ಇದೆ. ಈ ಕುರಿತು ಮಾಹಿತಿ ನೀಡುವಂತೆ ಆರ್‌ಟಿಐನಲ್ಲಿ ಅರ್ಜಿ ಸಲ್ಲಿಸಿದರೆ ಪ್ರಧಾನಿ ಕಾರ್ಯಾಲಯ ಅದನ್ನು ತಿರಸ್ಕರಿಸಿದೆ. ಸರಿಯಾಗಿ ಉಪಯೋಗವಾಗಿದ್ದಲ್ಲಿ ಅದನ್ನು ಸಾರ್ವಜನಿಕರ ಮುಂದಿಡಲು ಯಾಕೆ ಹಿಂದೇಟು ಹಾಕಲಾಗುತ್ತಿದೆ ಎಂದು ಪ್ರಶ್ನಿಸಿದರು.

ಸಿಎಂ ಕೇರ್ಸ್ ನಿಧಿಯೂ ದುರುಪಯೋಗವಾಗುತ್ತಿರುವ ಬಗ್ಗೆ ಶಂಕೆ ಇದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗುಪ್ತಚರ ಮಾಹಿತಿಯ ಹೊರತಾಗಿಯೂ ಕಾಂಗ್ರೆಸ್ ಶಾಸಕರ ಮನೆ ಮೇಲೆ ದಾಳಿ ನಡೆಯುವಾಗ ತಡೆಯಲು ವಿಫಲವಾಗಿದೆ. ಉತ್ತರ ಕರ್ನಾಟಕದಲ್ಲಿ ಉತ್ತಮ ಮಳೆಯ ಮೂಲಕ ಕೃಷಿ ಚಟುವಟಿಕೆ ನಡೆಯುವ ಈ ಸಂದರ್ಭದಲ್ಲಿ ರೈತರಿಗೆ ರಸಗೊಬ್ಬರವನ್ನು ನಿರೀಕ್ಷಿತ ಮಟ್ಟದಲ್ಲಿ ನೀಡಲು ಸರಕಾರ ವಿಫಲವಾಗಿದೆ. ರೈತರು ಮುಂಜಾನೆಯಿಂದಲೇ ಸರಣಿ ಕಾಯುವ ಪರಿಸ್ಥಿತಿ ಇದೆ ಎಂದು ಹರೀಶ್ ಕುಮಾರ್ ಆರೋಪಿಸಿದರು.

ಬಿಲ್ಡರ್, ಗುತ್ತಿಗೆದಾರರಿಂದ ಹಣ ವಸೂಲಿಗೆ ಅಧಿಕಾರಿಗಳ ಬಳಕೆ: ಮಿಥುನ್ ರೈ ಆರೋಪ

ಕರ್ನಾಟಕದ ನಗರಾಭಿವೃದ್ಧಿ ಸಚಿವರಿಂದ ಹಿರಿಯ ಅಧಿಕಾರಿಗಳಿಗೆ ದೌರ್ಜನ್ಯ, ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಮಾತುಗಳು ಸಾಮಾಜಿಕ ವಲಯದಲ್ಲಿ ವ್ಯಕ್ತವಾಗಿದ್ದು, ಈ ಕುರಿತಂತೆ ಸತ್ಯಾಂಶವನ್ನು ತಿಳಿಯಲು ಸಚಿವರ ಆಪ್ತರ ಒಂದು ತಿಂಗಳ ಕಾಲ್ ಡೀಟೇಲ್ಸ್ ಮಾಹಿತಿಯನ್ನು ಜನಸಾಮಾನ್ಯರಿಗೆ ಒದಗಿಸಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಒತ್ತಾಯಿಸಿದ್ದಾರೆ.

ಗುತ್ತಿಗೆದಾರರು, ಬಿಲ್ಡರ್‌ಗಳಿಂದ ಹಣ ವಸೂಲು ಮಾಡಲು ಹಿರಿಯ ಅಧಿಕಾರಿಗಳನ್ನು ಬಳಸಲಾಗುತ್ತಿದ್ದು, ಅದಕ್ಕಾಗಿ ಅವರು ಸ್ವಯಂ ಪ್ರೇರಿತವಾಗಿ ವರ್ಗಾವಣೆಗೆ ಮುಂದಾಗುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಸತ್ಯಾಂಶವನ್ನು ತಿಳಿಸಬೇಕು. ನಗರಾಭಿವೃದ್ಧಿ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಟಿ.ಕೆ. ಸುಧೀರ್, ವಿನಯ್‌ರಾಜ್, ನೀರಜ್‌ಪಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News