ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಅಮಾಯಕರ ಪರ ಕಾನೂನು ಹೋರಾಟ ನಡೆಸಲು ಮುಂದಾದ ಜಾತ್ಯತೀತ ವಕೀಲರ ವೇದಿಕೆ

Update: 2020-08-19 14:23 GMT

ಬೆಂಗಳೂರು, ಆ.19: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್‍ಭೈರಸಂದ್ರದಲ್ಲಿ ಆ.11ರಂದು ನಡೆದ ಗಲಭೆ ಪ್ರಕರಣದಲ್ಲಿ ಅಮಾಯಕರನ್ನೂ ಬಂಧಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಅವರ ಪರವಾಗಿ ಉಚಿತವಾಗಿ ಕಾನೂನು ಹೋರಾಟ ನಡೆಸಲು ಹೈಕೋರ್ಟ್‍ನ ಹಿರಿಯ ನ್ಯಾಯವಾದಿಗಳಾದ ಇಶ್ತಿಯಾಕ್ ಅಹ್ಮದ್ ಹಾಗೂ ಸೈಯ್ಯದ್ ಇಶ್ರತ್ ಉಲ್ಲಾ ನೇತೃತ್ವದಲ್ಲಿ ಸಮಾನ ಮನಸ್ಕ ವಕೀಲರ ತಂಡವು ‘ಜಾತ್ಯತೀತ ವಕೀಲರ ವೇದಿಕೆ’ಯನ್ನು ಅಸ್ತಿತ್ವಕ್ಕೆ ತಂದಿದೆ.

ಗಲಭೆ ದಿನ ಪೊಲೀಸರ ಗುಂಡೇಟಿಗೆ ಮೂವರು ಸ್ಥಳದಲ್ಲೆ ಮೃತಪಟ್ಟಿದ್ದು, ಒಬ್ಬ ಯುವಕ ಬೌರಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೆ 300ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದು, 70ಕ್ಕೂ ಹೆಚ್ಚು ಎಫ್‍ಐಆರ್‍ಗಳನ್ನು ದಾಖಲಿಸಿದ್ದಾರೆ. ಈ ಪೈಕಿ ಎರಡು ಎಫ್‍ಐಆರ್‍ಗಳನ್ನು ಯುಎಪಿಎ ಕಾಯ್ದೆಯಡಿ ದಾಖಲಿಸಿದ್ದು, ಇದರಲ್ಲಿ ಸುಮಾರು 60 ಮಂದಿಯನ್ನು ಹೆಸರಿಸಲಾಗಿದೆ ಎಂದು ತಿಳಿದು ಬಂದಿದೆ.

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್‍ಭೈರಸಂದ್ರದಲ್ಲಿ ಶೇ.90ರಷ್ಟು ಮಂದಿ ಬಡವರು, ದಿನಗೂಲಿ ಆಧಾರದಲ್ಲಿ ದುಡಿಯುವ ವರ್ಗಕ್ಕೆ ಸೇರಿದವರಾಗಿದ್ದಾರೆ. ಪೊಲೀಸರಿಂದ ಬಂಧನಕ್ಕೊಳಗಾಗಿರುವವರಲ್ಲಿಯೂ ಹೆಚ್ಚಿನ ಪ್ರಮಾಣದ ಜನ ಇದೇ ವರ್ಗಕ್ಕೆ ಸೇರಿದವರು ಎಂಬ ಮಾಹಿತಿ ಸಿಕ್ಕಿದೆ. ಆದುದರಿಂದ, ಈ ಪ್ರಕರಣದಲ್ಲಿ ಭಾಗಿಯಾಗದೆ ಇರುವಂತಹ ಅಮಾಯಕರ ಪರವಾಗಿ ಕಾನೂನು ಹೋರಾಟ ನಡೆಸುವುದಾಗಿ ಜಾತ್ಯತೀತ ವಕೀಲರ ವೇದಿಕೆ ತಿಳಿಸಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ‘ವಾರ್ತಾಭಾರತಿ’ ಜೊತೆ ಮಾತನಾಡಿದ ಜಾತ್ಯತೀತ ವಕೀಲರ ವೇದಿಕೆಯ ಅಧ್ಯಕ್ಷ ಇಶ್ತಿಯಾಕ್ ಅಹ್ಮದ್, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್‍ಭೈರಸಂದ್ರದಲ್ಲಿ ಅಂದು ನಡೆದಂತಹ ಘಟನೆ ಖಂಡನಾರ್ಹ. ಈ ಪ್ರಕರಣದಲ್ಲಿ ಹಲವಾರು ಮಂದಿ ಅಮಾಯಕರನ್ನು ಬಂಧಿಸುತ್ತಿರುವ ಮಾಹಿತಿ ಸಿಕ್ಕಿದೆ. ಆದುದರಿಂದ, ಸಮಾನ ಮನಸ್ಕ ವಕೀಲರು ಸೇರಿ ಜಾತ್ಯತೀತ ವಕೀಲರ ವೇದಿಕೆಯನ್ನು ರಚಿಸಿಕೊಂಡು, ಅಮಾಯಕರ ಪರವಾಗಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ ಎಂದರು.

ಕೋವಿಡ್-19 ಸಾಂಕ್ರಾಮಿಕದಿಂದಾಗಿ ಕಳೆದ ಮಾರ್ಚ್ ತಿಂಗಳಿನಿಂದ ಅಲ್ಲಿನ ಜನ ಒಂದು ಹೊತ್ತು ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಇದೆ. ಈ ಪ್ರದೇಶಗಳಲ್ಲಿ ಅತೀ ಬಡವರು ವಾಸಮಾಡುವಂತಹ ಸ್ಥಳಗಳಾಗಿವೆ. ಹಲವಾರು ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಿಡಿಗೇಡಿಯೊಬ್ಬ ಮಾಡಿದ ದುಷ್ಕೃತ್ಯದಿಂದ ಈ ಘಟನೆ ನಡೆದಿದೆ. ಪೊಲೀಸರ ಜೊತೆ ನಾವು ನಿಲ್ಲುತ್ತೇವೆ. ಆದರೆ, ತನಿಖೆಯ ನೆಪದಲ್ಲಿ ಅಪರಾಧಿಗಳು ತಪ್ಪಿಸಿಕೊಳ್ಳಬಾರದು. ಅದೇ ರೀತಿ ಅಮಾಯಕರಿಗೆ ಶಿಕ್ಷೆಯಾಗಬಾರದು ಎಂಬುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.

ಆದುದರಿಂದ, ಈ ಘಟನೆಗೆ ಸಂಬಂಧವೆ ಇಲ್ಲದವರನ್ನು ಪೊಲೀಸರು ಬಂಧಿಸಿದ್ದರೆ ಅಂತಹವರ ಪರವಾಗಿ ನಾವು ಕಾನೂನು ಹೋರಾಟ ಮಾಡಿ, ಅವರನ್ನು ಬಿಡುಗಡೆ ಮಾಡುವ ಪ್ರಯತ್ನ ಮಾಡುತ್ತೇವೆ. ನಾವು ಪ್ರಕರಣವನ್ನು ತೆಗೆದುಕೊಳ್ಳುವ ಮುನ್ನ ಕುಟುಂಬ ಸದಸ್ಯರಿಂದ ಬಂಧಿತ ವ್ಯಕ್ತಿ ಘಟನೆ ಸಂದರ್ಭದಲ್ಲಿ ಅಲ್ಲಿ ಇರಲಿಲ್ಲ, ಘಟನೆಗೂ ಆತನಿಗೂ ಯಾವುದೆ ಸಂಬಂಧವಿಲ್ಲ, ಅಲ್ಲದೆ ಯಾವುದೆ ಸಂಘಟನೆಯ ಜೊತೆ ಆತ ಗುರುತಿಸಿಕೊಂಡಿರಲಿಲ್ಲ ಎಂಬ ಅಂಶವನ್ನು ಒಳಗೊಂಡ ಪ್ರಮಾಣ ಪತ್ರವನ್ನು ಸ್ವೀಕರಿಸಿದ ಬಳಿಕ ಮುಂದೆ ಹೋಗುತ್ತೇವೆ ಎಂದು ಇಶ್ತಿಯಾಕ್ ಅಹ್ಮದ್ ತಿಳಿಸಿದರು.

ಈಗ ನಮ್ಮ ವೇದಿಕೆ ಜೊತೆಯಲ್ಲಿ ಕೆಲಸ ಮಾಡಲು 100 ಹೆಚ್ಚು ವಕೀಲರು ಸ್ವಯಂಪ್ರೇರಿತವಾಗಿ ಮುಂದೆ ಬಂದಿದ್ದಾರೆ. ಉಚಿತವಾಗಿ ನಾವು ಅಮಾಯಕರ ಬಡ ಕುಟುಂಬಗಳಿಗೆ ಕಾನೂನು ನೆರವು ನೀಡುತ್ತಿದ್ದೇವೆ. ನಾವು ಯಾರನ್ನೂ ಬಲವಂತವಾಗಿ ನಮ್ಮ ಬಳಿ ಕರೆಸಿಕೊಳ್ಳುವುದಿಲ್ಲ. ಸಹಾಯವಾಣಿಗಳನ್ನು ಆರಂಭಿಸಿದ್ದೇವೆ, ಯಾರು ತಾವಾಗಿಯೆ ನಮ್ಮ ಬಳಿ ಬರುತ್ತಾರೋ ಅವರಿಗೆ ನಾವು ನೆರವು ನೀಡುತ್ತೇವೆ. ಈಗಾಗಲೆ 150ಕ್ಕೂ ಹೆಚ್ಚು ಮಂದಿ ಬಂಧಿತರ ಕುಟುಂಬದವರು ನಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಅವರು ಹೇಳಿದರು.

ಎಫ್‍ಐಆರ್‍ಗಳಲ್ಲಿ 307 ಅಂತಹ ಜಾಮೀನು ರಹಿತವಾದ ಸೆಕ್ಷನ್‍ಗಳನ್ನು ಹಾಕಿದ್ದಾರೆ. ಅಲ್ಲದೆ, ಕೆಲವು ಎಫ್‍ಐಆರ್‍ಗಳನ್ನು ಯುಎಪಿಎ ಕಾಯ್ದೆಯಡಿ ಹಾಕಿದ್ದಾರೆ. ಇದು ಸೆಷನ್ಸ್ ಕೋರ್ಟ್‍ಗೆ ವರ್ಗಾವಣೆ ಆಗುತ್ತದೆ. ಅಂತಹ ಸಂದರ್ಭದಲ್ಲಿ ಜಾಮೀನು ಸಿಗುವುದು ವಿಳಂಬ ಆಗಬಹುದು. ಆದುದರಿಂದ, ಕುಟುಂಬಸ್ಥರು ನಮ್ಮ ಜೊತೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಜಾತ್ಯತೀತ ವಕೀಲರ ವೇದಿಕೆಯ ಉಪಾಧ್ಯಕ್ಷ ಸೈಯ್ಯದ್ ಇಶ್ರತ್ ಉಲ್ಲಾ ಮಾತನಾಡಿ, ಈ ಹಿಂದೆ ಗಾಯಕ ಸೋನು ನಿಗಮ್ ‘ಅಝಾನ್’ ಬಗ್ಗೆ ಟೀಕೆ ಮಾಡಿದಾಗಲೂ ಸುಮಾರು ಎರಡೂವರೆ ಸಾವಿರಾರು ಜನ ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ಎದುರು ಸೇರಿ ಪ್ರತಿಭಟನೆ ನಡೆಸಿ, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು ಎಂದು ಸ್ಮರಿಸಿಕೊಂಡರು. 

ಸಂಜೆ 6 ಗಂಟೆಯಿಂದ 12 ಗಂಟೆಯವರೆಗೆ ಈ ಗಲಭೆ ನಡೆದಿದೆ. ಪೊಲೀಸರು ತಕ್ಷಣ ಈ ಬಗ್ಗೆ ಕ್ರಮ ಕೈಗೊಂಡಿದ್ದರೆ ಬಹುಷಃ ಇಂತಹ ಘಟನೆ ಆಗುತ್ತಿರಲಿಲ್ಲ ಎಂದು ಅವರು ಹೇಳಿದರು.

ವಕೀಲರ ಶುಲ್ಕ ನೀಡಲು ಸಾಧ್ಯವಿಲ್ಲದಂತಹ, ದಿನಗೂಲಿ ನೌಕರಿ ಮಾಡುವಂತಹ, ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಉದ್ಯೋಗಗಳನ್ನು ಕಳೆದುಕೊಂಡಿರುವಂತಹ ಕುಟುಂಬಗಳ ನೆರವಿಗೆ ನಮ್ಮ ತಂಡ ನಿಲ್ಲಲಿದೆ. ಕೇವಲ ಮುಸ್ಲಿಮ್ ವಕೀಲರು ಅಷ್ಟೇ ಅಲ್ಲ, ಎಲ್ಲಾ ಧರ್ಮಗಳ ಹಿರಿಯ ಕ್ರಿಮಿನಲ್ ವಕೀಲರು ಕೂಡ ಬಡವರಿಗೆ ಹಾಗೂ ಅಮಾಯಕರಿಗೆ ನೆರವು ನೀಡಲು ನಮ್ಮ ಜೊತೆ ಕೈ ಜೋಡಿಸಿದ್ದಾರೆ ಎಂದು ಇಶ್ರತ್ ಉಲ್ಲಾ ತಿಳಿಸಿದರು.

ಸಹಾಯವಾಣಿ
ಸೈಯ್ಯದ್ ಇಶ್ರತ್ ಉಲ್ಲಾ-9845355792, ಮುಹಮ್ಮದ್ ಅರ್ಶದ್ ಅಹ್ಮದ್ 92431 09141, ನವೀದ್ ಅಹ್ಮದ್-9620245382, ಮೊಯಿನ್ ಅಬ್ಬಾಸಿ-9886964717, ಸದ್ದಾಂ ಬೇಗ್-9741988782, ಸಿರಾಜುದ್ದೀನ್ ಅಹ್ಮದ್-7676876411, ವಹೀದಾ-8618827320, ಸೈಯ್ಯದ್ ಅಹ್ಮದ್-8088056947. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News