ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯು ಉಳುವವನನ್ನು ಕೂಲಿಯನ್ನಾಗಿಸುವ ಯತ್ನ: ಯು.ಟಿ.ಖಾದರ್

Update: 2020-08-20 09:11 GMT

ಮಂಗಳೂರು, ಆ.20: ಉಳುವವನ್ನು ಭೂಮಿಯ ಒಡೆಯನನ್ನನಾಗಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ಭೂ ಸುಧಾರಣಾ ಕಾಯ್ದೆಯನ್ನು ಬಿಜೆಪಿ ಸರಕಾರ ತಿದ್ದುಪಡಿ ಮಾಡುವ ಮೂಲಕ ಉಳುವವನನ್ನು ಕೂಲಿಯನ್ನಾಗಿಸುವ ಯತ್ನಕ್ಕೆ ಮುಂದಾಗಿದೆ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದರು.

ನಗರದ ಕುದ್ಮುಲ್ ರಂಗರಾವ್ ಪುರಭವನದ ಎದುರು ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ದಿನದ ಪ್ರಯುಕ್ತ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳ ವಿರುದ್ಧ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡಿದರು.

ಕೊರೋನ ನಿರ್ವಹಣೆಯಲ್ಲಿ ವಿಫಲವಾಗಿರುವ ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದು ಆರೋಪಿಸಿದ ಅವರು, ಎಪಿಎಂಸಿ ಕಾಯ್ದೆ ಹಾಗೂ ಭೂ ಮಸೂದೆ ಕಾಯ್ದೆ ಕಾಯಿದೆ ತಿದ್ದುಪಡಿ ದೇಶದ ಭವಿಷ್ಯಕ್ಕೆ ಮಾರಕ ಎಂದರು.

ಕೊರೋನದಂತಹ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ಸೇವೆಗೆ ಆದ್ಯತೆ ನೀಡಬೇಕಾದ ಸರಕಾರ ಅವ್ಯವಹಾರದಲ್ಲಿ ನಿರತವಾಗಿದೆ. ಆಧುನಿಕ ಭಾರತದ ಶಿಲ್ಪಿ ರಾಜೀವ್ ಗಾಂಧಿಯವರು ಪ್ರಧಾನಿಯಾಗಿ ಯುವಜನತೆಗೆ ಸ್ಪರ್ಧಾತ್ಮಕ ಜೀವನಕ್ಕಾಗಿ ಕಂಪ್ಯೂಟರೀಕರಣ, ಮೀಸಲಾತಿಯಂತಹ ದಿಟ್ಟ ನಿರ್ಧಾರಗಳನ್ನು ಕೈಗೊಂಡ ಪರಿಣಾಮ ಇಂದಿನ ಯುವಜನತೆ ಅದರ ಫಲವನ್ನು ಪಡೆಯುತ್ತಿದ್ದಾರೆ ಎಂದರು.

ಯುವ ಕಾಂಗ್ರೆಸ್‌ನ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ರಾಜ್ಯ ಸರಕಾರ ಕೊರೋನ ಅಟ್ಟಹಾಸ ಮೆರೆಯುತ್ತಿರುವ ಈ ಸಂದರ್ಭದಲ್ಲೂ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರದಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರಕಾರದಿಂದ ವಿತರಿಲಾದ ಆಹಾರ ಕಿಟ್‌ನಲ್ಲೂ ಅವ್ಯವಹಾರವಾಗಿದ್ದು, ಈ ಕುರಿತು ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಾಧೀಶರ ಮೂಲಕ ಕೋವಿಡ್ ಸಂದರ್ಭದ ಅವ್ಯವಹಾರದ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ಮಾಜಿ ಶಾಸಕ ಮೊಯ್ದಿನ್ ಬಾವ, ಮುಖಂಡರಾದ ಕೃಪಾ ಆಳ್ವ, ಕವಿತಾ ಸನಿಲ್, ವಿನಯ ರಾಜ್, ಪ್ರವೀಣ್ ಚಂದ್ರ ಆಳ್ವ, ಸಲೀಂ, ಎನ್.ಎಸ್. ಕರೀಂ, ವಿಶ್ವಾಸ್ ‌ಕುಮಾರ್ ದಾಸ್, ಸದಾಶಿವ ಉಳ್ಳಾಲ್, ಅಪ್ಪಿ, ಟಿ.ಕೆ. ಸುಧೀರ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News