ಸೆ.21ರಿಂದ ವಿಧಾನ ಮಂಡಲ ಅಧಿವೇಶನ ನಡೆಸಲು ಸಂಪುಟ ಸಭೆ ತೀರ್ಮಾನ

Update: 2020-08-20 14:14 GMT

ಬೆಂಗಳೂರು, ಆ. 20: ವಿಧಾನ ಮಂಡಲ ಮಳೆಗಾಲದ ಅಧಿವೇಶನವನ್ನು ಸೆಪ್ಟಂಬರ್ 21ರಿಂದ ಸೆ.30ರವರೆಗೆ ಬೆಂಗಳೂರಿನಲ್ಲಿ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ, ಕೋವಿಡ್-19 ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದ ಹಿನ್ನೆಯಲ್ಲಿ ಮುಂದೂಡಲ್ಪಟ್ಟಿದ್ದ ಮಳೆಗಾಲದ ಅಧಿವೇಶ ದಿನಾಂಕ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಒಂದು ಅಧಿವೇಶನ ಕಲಾಪದಿಂದ ಮತ್ತೊಂದು ಅಧಿವೇಶನ ನಡೆಸಲು ಆರು ತಿಂಗಳಗಿಂತ ಹೆಚ್ಚು ಅಂತರವಿರಬಾರದು ಎಂಬ ನಿಯಮವಿದೆ. ಆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಅನಿವಾರ್ಯವಾಗಿ ಅಧಿವೇಶನ ನಡೆಸಲೇಬೇಕು. ಹೀಗಾಗಿ ಸೆ.21ರಿಂದ 10 ದಿನಗಳ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ಜೂನ್ ತಿಂಗಳಿನಲ್ಲಿ ಮಳೆಗಾಲದ ಅಧಿವೇಶನವನ್ನು ನಡೆಸಬೇಕಿತ್ತು. ಆದರೆ, ಮಾರಕ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಅಧಿವೇಶನ ಮುಂದೂಡಲಾಗಿತ್ತು. ಸೆ.23ರ ಒಳಗಾಗಿ ಅಧಿವೇಶನ ಕರೆಯಬೇಕಿತ್ತು. ಹೀಗಾಗಿ ಸೆ.21ರಿಂದ ಅಧಿವೇಶನ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ ಎಂದ ಅವರು, ಕೊರೋನ ನಿಯಂತ್ರಣ ದೃಷ್ಟಿಯಿಂದ ಕೈಗೊಳ್ಳಬೇಕಿರುವ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಸ್ಪೀಕರ್ ಹಾಗೂ ಸಭಾಪತಿ ಅವರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News